ಜಿಮ್ಸ್ ಆಸ್ಪತ್ರೆಗೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್ ಜಾರಿ

ಕಲಬುರಗಿ.ಜ.5: ನಗರದ ಜಿಮ್ಸ್ ಆಸ್ಪತ್ರೆಯ ಮಲ್ಟಿ ಫಂಕ್ಷನಲ್ ಡಾಯಲಿಸಿಸ್ ಯಂತ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಹತ್ತಕ್ಕೂ ಹೆಚ್ಚು ರೋಗಿಗಳು ಐಸಿಯು ವಾರ್ಡ್‍ಗೆ ದಾಖಲಿಸುವಂತಹ ಘಟನೆ ಹಾಗೂ ಶಹಾಬಾದ್ ಪಟ್ಟಣದ 16 ವರ್ಷದ ಯುವಕ ಆಕಾಶ್ ನಿಧನ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಜಿಮ್ಸ್ ಆಸ್ಪತ್ರೆಯ ಜಿಲ್ಲಾ ತಜ್ಞ ಹಾಗೂ ಆಸ್ಪತ್ರೆಯ ಅಧೀಕ್ಷರಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ.
ಯಂತ್ರದಲ್ಲಿ ತಂತ್ರಿಕ ದೋಷದ ಕುರಿತು ನಿರ್ಲಕ್ಷ್ಯ ವಹಿಸಿರುವ ಕುರಿತು ಜಿಲ್ಲಾ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಸದಸ್ಯ ಮೊಹ್ಮದ್ ರಿಯಾಜುದ್ದೀನ್ ಖತೀಬ್ ಅವರು ಸಲ್ಲಿಸಿದ ದೂರನ್ನು ಪರಿಶೀಲಿಸಿದ ಪ್ರಕರಣದ ಕುರಿತು ವಿಚಾರಣೆ ನಡೆಸಿ ಘಟನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಹಾಜರಾಗುವಂತೆ ಆಯೋಗ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಮಾನವ ಹಕ್ಕುಗಳ ಹೋರಾಟಗಾರ ಮೊಹ್ಮದ್ ರಿಯಾಜುದ್ದೀನ್ ಖತೀಬ್ ಅವರು ಮಾತನಾಡಿ, ಜಿಮ್ಸ್ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆಯಲ್ಲಿದ್ದ ಹತ್ತಕ್ಕೂ ಹೆಚ್ಚು ರೋಗಿಗಳ ಆರೋಗ್ಯ ಹದಗೆಟ್ಟು ಎಸ್‍ಐಸಿಯು ಮತ್ತು ಐಸಿಯು ವಾರ್ಡ್‍ಗೆ ದಾಖಲಿಸಲಾಗಿತ್ತು. ಆದಾಗ್ಯೂ, ಘಟನೆಯಿಂದಾಗಿ ಆಕಾಶ್ ಮೃತಪಟ್ಟಿದ್ದು, ಆಯೋಗದಿಂದ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬ ಆಶಯ ನನ್ನದಾಗಿದೆ ಎಂದರು.