ಜಿಮ್ಸ್ ಅಸ್ಪತ್ರೆಯ ಆಕ್ಸಿಜನ್ ಪ್ಲ್ಯಾಂಟ್ ದುರಸ್ತಿ ಕಾರ್ಯ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವರು

ಕಲಬುರಗಿ,ಮೇ.28:ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಶುಕ್ರವಾರ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಹಳೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲ್ಯಾಂಟ್ ದುರಸ್ತಿ ಕಾರ್ಯ ವೀಕ್ಷಿಸಿದರು.

ಆಕ್ಸಿಜನ್ ಪ್ಲ್ಯಾಂಟ್ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಜಿಮ್ಸ್ ಅಧಿಕಾರಿಗಳಿಗೆ ಸೂಚಿಸಿದರು. ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್ ಅವರು ದುರಸ್ತಿ ಕಾಮಗಾರಿ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ಸ್ಥಳದಲ್ಲಿದ್ದ ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸದ್ಯ ಆಸ್ಪತ್ರೆಯಲ್ಲಿರುವ 60 ಜಂಬೊ ಸಿಲಿಂಡರ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಇಳಿಮುಖವಾದ ಕಾರಣ ಪ್ರಸ್ತುತ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮೀಸಲಿರಿಸಿದ 99 ಐ.ಸಿ.ಯೂ ಹಾಸಿಗೆಯಲ್ಲಿ 20, 75 ಹೆಚ್.ಡಿ.ಯೂ. ಹಾಸಿಗೆಯಲ್ಲಿ 39 ಹಾಗೂ 230 ಐಸೋಲೇಷನ್ ಹಾಸಿಗೆಯಲ್ಲಿ 157 ಹಾಸಿಗೆಗಳು ಖಾಲಿ ಇವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಇದಾದ ಬಳಿಕ ಜಿಲ್ಲಾ ಕೋವಿಡ್ ವಾರ್ ರೂಂಗೆ ಭೇಟಿ ನೀಡಿದ ಸಚಿವರು ವಾರ್ ರೂಂ ಕಾರ್ಯನಿರ್ವಹಣೆ ಬಗ್ಗೆ ಅದರ ನೋಡೆಲ್ ಅಧಿಕಾರಿಯಾಗಿರುವ ಪೆÇ್ರಬೇಷನರ್ ಸಹಾಯಕ ಆಯುಕ್ತೆ ಡಾ.ಶೃತಿ ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡರು.

ಕೋವಿಡ್ ಪುನಶ್ಚೇತನ ಕೇಂದ್ರಕ್ಕು ಸಚಿವರ ಭೇಟಿ:- ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ರೋಗಿಗಳಿಗೆ ಕಲಬುರಗಿ ನಗರದ ರಾಮ ಮಂದಿರ-ನಾಗನಹಳ್ಳಿ ರಿಂಗ್ ರಸ್ತೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಲ್ಯಾಣ ಮಂಟಪದಲ್ಲಿ ಕಲಬುರಗಿ ಜಿಲ್ಲಾಡಳಿತ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಒಂದು ಗಂಟೆಯ ಆರೋಗ್ಯ ಪುನಶ್ಚೇತನ ಕುರಿತು ತರಬೇತಿ ನೀಡಲು ಸಿದ್ಧಗೊಂಡಿರುವ ಕೋವಿಡ್ ಪುನಶ್ಚೇತನ ಕೇಂದ್ರಕ್ಕೂ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಅದರ ಕಾರ್ಯನಿರ್ವಹಣೆ ಕುರಿತು ನೋಡೆಲ್ ಅಧಿಕಾರಿಯಾಗಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ಅವರಿಂದ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ಸಚಿವರು ಕಲಬುರಗಿ ಜಿಲ್ಲಾಡಳಿತವು ಕೋವಿಡ್ ನಂತಹ ಕೆಟ್ಟ ಪರಿಸ್ಥಿತಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯವಾಗಿದೆ. ಕೋವಿಡ್ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಿ ಜಯಿಸೋಣ ಎಂದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟಿಲ, ಸುನೀಲ್ ವಲ್ಯಾಪುರೆ, ಶಶಿಲ್ ಜಿ. ನಮೋಶಿ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀμï ಶಶಿ, ಡಿ.ಹೆಚ್.ಓ ಡಾ. ಶರಣಬಸಪ್ಪ ಗಣಜಲಖೇಡ್ ಸೇರಿದಂತೆ ಅರೋಗ್ಯ ಇಲಾಖೆಯ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.