ಜಿಪಂ, ತಾಪಂ ಮರು ವಿಂಗಡಣೆ ಅವೈಜ್ಞಾನಿಕ

ಆಳಂದ ;ಎ.3: ತಾಲೂಕಿನ ನಿಂಬರ್ಗಾ ಗ್ರಾಮದ ಜನಸಂಖ್ಯೆ ಆಧಾರದ ಮೇಲೆ ತಾಲೂಕಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡುತ್ತಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಯಳಸಂಗಿ ಖಂಡಿಸಿದ್ದಾರೆ.
ಜನಸಂಖ್ಯೆಯನ್ನು ಮಾನದಂಡವಾಗಿಟ್ಟುಕೊಂಡು ಜಾತಿ ಪ್ರಾಬಲ್ಯಕ್ಕೆ ಮಣೆ ಹಾಕುತ್ತಿರುವ ಕ್ರಮ ಶೋಭೆಯಲ್ಲ. ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಆಳಂದ ತಾಲೂಕಿನ ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈ ಬಿಡುತ್ತಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಜನರ ಭಾವನೆಗಳ ಜತೆ ಚೆಲ್ಲಾಟವಾಡಿದಂತಾಗುತ್ತದೆ.
ಅಲ್ಲದೆ ಕ್ಷೇತ್ರದ ಅಭಿವೃದ್ದಿಗೂ ಮಾರಕವಾಗಲಿದೆ. ಹೀಗಾಗಿ ಸರ್ಕಾರ ಮತ್ತು ಚುನಾವಣಾ ಆಯೋಗ ಕ್ಷೇತ್ರಗಳ ವಿಂಗಡಣೆ ಕೈಬಿಟ್ಟು, ಈ ಹಿಂದೆ ಇದ್ದ ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನೇ ಮುಂದುವರೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ನಿಂಬರ್ಗಾ ಬದಲು ಕಡಗಂಚಿಯನ್ನು ಜಿಲ್ಲಾ ಪಂಚಾಯತಿ ಕ್ಷೇತ್ರವಾಗಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಸರಿಯಾದುದ್ದಲ್ಲ. ಕ್ಷೇತ್ರದ ವ್ಯಾಪ್ತಿಯ ಸಾರ್ವಜನಿಕರ ಅಭಿಪ್ರಾಯ ಹಾಗೂ ಭಾವನೆಗಳಿಗೆ ವಿರುದ್ಧವಾಗಿ ಕ್ಷೇತ್ರಗಳ ವಿಂಗಡಣೆ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.