ಜಿನ್ನಾಪುರದಲ್ಲಿ ಅನ್ನದಾನ ಶಿಬಿರ

ದೇವದುರ್ಗ.ಏ.೦೪- ಸಮೀಪದ ಗಬ್ಬೂರು: ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕಾಗಿ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗಾಗಿ ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ಜಿನ್ನಾಪುರ ಗ್ರಾಮಸ್ಥರು ಸತತ ೧೪ನೇ ವರ್ಷ ಅನ್ನದಾನ ಶಿಬಿರ ಆಯೋಜಿಸಿದ್ದಾರೆ.
ಯುಗಾದಿ ನಿಮಿತ್ತ ವಿವಿಧ ಜಿಲ್ಲೆಗಳಿಂದ ಶ್ರೀಶೈಲಕ್ಕೆ ಪದಾಯತ್ರೆ ಕೈಗೊಳ್ಳುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹಿಮ್ಮಡಿಯಾಗುತ್ತಿದ್ದು, ಹಲವು ಭಕ್ತರು ತಾಲೂಕಿನ ಮೂಲಕ ಪಾದಯಾತ್ರೆಕೈಗೊಳ್ಳುತ್ತಿದ್ದಾರೆ. ಹೋಳಿ ಹುಣ್ಣಿಮೆ ಮಾರನೆ ದಿನದಿಂದ ಆರಂಭವಾದ ಪಾದಯಾತ್ರೆ ಯುಗಾದಿ ಅಮಾವಾಸ್ಯೆ ೨-೩ದಿನ ಮುಂಚೆಗೆ ಅಲ್ಲಿಗೆ ತಲುಪುತ್ತದೆ. ೮-೧೦ ದಿನಗಳಲ್ಲಿ ಸಾವಿರಾರು ಭಕ್ತರು ತಾಲೂಕಿನ ಮೂಲಕ ಪಾದಯಾತ್ರೆ ನಡೆಸುತ್ತಾರೆ.
ಬಿಜಾಪುರ, ಯಾದಗಿರಿ, ಕಲಬುರಗಿಯ ಗಡಿಭಾಗ, ಬಾಗಲಕೋಟೆ ಜಿಲ್ಲೆಯ ಕೊನೇಯ ಭಾಗದ ಸಾವಿರಾರು ಭಕ್ತರು ತಿಂಥಣಿ ಬ್ರಿಡ್ಜ್ ಹಾಗೂ ಹೂವಿನಹೆಡಗಿ ಸೇತುವೆ ಮೂಲಕ ರಾಯಚೂರು ರಾಜ್ಯ ಹೆದಾರಿಯಲ್ಲಿ ಪಾದಯಾತ್ರೆ ನಡೆಸುತ್ತಾರೆ. ಶಿಬಿರದಲ್ಲಿ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ವಿಶ್ರಾಂತಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಸತತ ೧೪ನೇ ವರ್ಷ ಶಿಬಿರ ಹಮ್ಮಿಕೊಂಡಿರುವುದಕ್ಕೆ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.