
ಕಲಬುರಗಿ:ಮೇ.18: ಜಿನೇವಾದಲ್ಲಿರುವ ರೆಡ್ ಕ್ರಾಸ್ ಸೊಸೈಟಿಯ ಅಭಿವೃದ್ಧಿಯನ್ನು ನೋಡುವುದಕ್ಕಾಗಿ ಸಾರ್ವಜನಿ ಸಂಪರ್ಕ ಉಪ ಸಮಿತಿಯ ಸದಸ್ಯರ ನಿಯೋಗವನ್ನು ಕೊಂಡೊಯ್ಯುವ ಕುರಿತಂತೆ ಬೆಂಗಳೂರಿನ ರೆಡ್ ಕ್ರಾಸ್ ಕೇಂದ್ರ ಕಚೇರಿಯಲ್ಲಿ ಜರುಗಿದ ಸಂಸ್ಥೆಯ ರಾಜ್ಯ ಘಟಕದ ಸಾರ್ವಜನಿಕ ಸಂಪರ್ಕ ಉಪ ಸಮಿತಿಯ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಉಪ ಸಮಿತಿಯ ಸದಸ್ಯ ಶಿವರಾಜ್ ಅಂಡಗಿ ಅವರು ತಿಳಿಸಿದ್ದಾರೆ.
ಉಪ ಸಮಿತಿ ನಿರ್ದೇಶಕ ಡಿ.ಎಸ್. ಸಿದ್ದಣ್ಣ ಅವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ರೆಡ್ ಕ್ರಾಸ್ ಸೊಸೈಟಿಯ ಶತಮಾನೋತ್ಸವ ಆಚರಣೆಯ ಹಿನ್ನಲೆಯಲ್ಲಿ ಎಲ್ಲ 31 ಜಿಲ್ಲೆಗಳ ರೆಡ್ ಕ್ರಾಸ್ ಸೊಸೈಟಿಯ ಸೇವೆಗಳನ್ನು ಚುರುಕುಗೊಳಿಸುವುದು ಹಾಗೂ ಆ ಹಿನ್ನಲೆಯಲ್ಲಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಜೊತೆಯಲ್ಲಿ ನಿರಂತರವಾಗಿ ಸಂಪರ್ಕ ಹೊಂದುವ ಮೂಲಕ ರಾಜ್ಯಾದ್ಯಂತ ರೆಡ್ ಕ್ರಾಸ್ ಸೊಸೈಟಿಯ ಚಟುವಟಿಕೆ ಕುರಿತು ಮಾಹಿತಿ ನೀಡುವ ಕುರಿತು ತೀರ್ಮಾನಿಸಲಾಯಿತು ಎಂದು ಅವರು ಹೇಳಿಕೆಯಲಿ ವಿವರಿಸಿದ್ದಾರೆ.
ಪ್ರತಿ ಜಿಲ್ಲೆಯವರು ಕನಿಷ್ಟ 3 ತಿಂಗಳಿಗೊಮ್ಮೆಯಾದರೂ ಕೇಂದ್ರ ಕಚೇರಿ ತಮ್ಮ ಚಟುವಟಿಕೆ ಕುರಿತು ಮಾಹಿತಿ ಸಲ್ಲಿಸಲು ಸಭೆಯಲ್ಲಿ ಸೂಚಿಸಲಾಯಿತು. ಯಾವ ಜಿಲ್ಲೆಯಲ್ಲಿ ರಕ್ತ ನಿಧಿ ಕೇಂದ್ರವಿಲ್ಲವೋ ಆ ಸ್ಥಳದಲ್ಲಿ ರಕ್ತ ನಿಧಿ ಕೇಂದ್ರ ಆರಂಭಿಸುವ ಕುರಿತು ಚರ್ಚಿಸಲಾಯಿತು. ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಬಾಲಸುಬ್ರಮಣ್ಯಂ ಅವರು ಚರ್ಚಿಸುವ ವಿಷಯಗಳನ್ನು ಸಭೆಯಲ್ಲಿ ಮಂಡಿಸಿ, ಕೊನೆಯಲ್ಲಿ ವಂದಿಸಿದರು.
ಸಭೆಯಲ್ಲಿ ಕಲಬುರ್ಗಿಯ ಶಿವರಾಜ್ ಅಂಡಗಿ, ಬಳ್ಳಾರಿಯ ಕೆ. ವೀರೇಶ್, ಶಿವಮೊಗ್ಗದ ಎ.ಎಂ. ಸುರೇಶ್, ಬೆಂಗಳೂರಿನ ಹೆಚ್.ಎಸ್. ಬಾಲಸುಬ್ರಮಣ್ಯಂ, ಬೆಳಗಾವಿಯ ವಿಕಾಸ್ ಕಲಘಟಗಿ ಮುಂತಾದವರು ಉಪಸ್ಥಿತರಿದ್ದರು.