ಜಿಡಗಾ: ಕಣ್ಮನ ಸೆಳೆದ ಗುರುವಂದನೆ ಮಹೋತ್ಸವ

ಆಳಂದ.ಡಿ.3. ತಾಲೂಕಿನ ಜಿಡಗಾ ಮಠದಲ್ಲಿ ಗುರವಾರ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ 37 ನೇ ಗುರುವಂದನ ಹಾಗೂ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮತ್ತು ಸ್ವರ ಸಂಗೀತ ಉತ್ಸವ ಕಾರ್ಯಕ್ರಮಗಳು ವೈಭವದಿಂದ ನೆರೆವೇರಿದವು.
ಮಠದ ಆವರಣದಲ್ಲಿ ಹಾಕಿದ್ದ ವರ್ಣರಂಜಿತ ಬೃಹತ್ ವೇದಿಕೆಯಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ರಾತ್ರಿವಿಡೀ ಜರುಗಿದವು. ಕಲ್ಯಾಣ
ಕರ್ನಾಟಕ ಭಾಗದ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಯಾದಗಿರಿ ಮಾತ್ರವಲ್ಲದೇ ಬೆಳಗಾವಿ, ನೆರೆಯ ಮಹಾರಾಷ್ಟ್ರ, ತೆಲಗಾಂಣ ರಾಜ್ಯಗಳ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೂಂಡಿದ್ದರು.
ನಿರಂತರ ಜೈಘೋಷಣೆಯೊಂದಿಗೆ ಗುರುವಂದನೆ ಅದ್ದೂರಿಯಾಗಿ ನೆರವೇರಿತು.
ಸಮಾರಂಭದಲ್ಲಿ ಜಿಡಗಾ ಮಠದ ಗುರುಪರಂಪರೆಯ ಕುರಿತಾದ ಭಕ್ತಿಗೀತೆಗಳೊಂದಿಗೆ ನೆರೆದ ಪ್ರೇಕ್ಷಕರಲ್ಲಿ ಭಕ್ತಸುಧೆ ಹರಿಸಿದರು. ನಂತರ ‘ಗೊಂಬೆ ಹೇಳುತೈತ್ತಿ ನಿನೇ ರಾಜಕುಮಾರ’ ಹಾಡಿನ ಮೂಲಕ ಕಿಕ್ಕಿರಿದು ತುಂಬಿದ ಸಭೆಯಲ್ಲಿ ಹಾಡು ಮಾರ್ದನಿಸಿತು. ಕಾರ್ಯಕ್ರಮಕ್ಕೂ ಮೊದಲು ಮಠದಲ್ಲಿ ಡಾ.ಮುರುಘರಾಜೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ 37 ಗೋವುಗಳ ಪೂಜೆ ನೆರೆವೇರಿತು.
ನಂತರ ವೈದ್ಯರ ತಂಡದಿಂದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು.
ಜಿಡಗಾ ಮಠದಿಂದ ಪ್ರತಿವರ್ಷ ನೀಡಲಾಗುವ ‘ಸಿದ್ಧಶ್ರೀ ಪ್ರಶಸ್ತಿ’ ಯನ್ನು ಈ ಬಾರಿ ನಟ ಪುನೀತ್ ರಾಜ್‍ಕುಮಾರ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಕಿರುತೆರೆ ನಿರೂಪಕಿ ಅನುಶ್ರೀ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಚಿನ್ಮಯಗಿರಿಯ ವೀರಮಹಾಂತ ಸ್ವಾಮೀಜಿ ಮಾತನಾಡಿ, ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರು ಭಕ್ತರ ಪಾಲಿನ ಕಾಮಧೇನು ಆಗಿದ್ದಾರೆ. ಧಾರ್ಮಿಕ ಸಮನ್ವಯ, ಸಾಮರಸ್ಯವು ಜಿಡಗಾ ಮಠದ 360 ಕ್ಕೂ ಹೆಚ್ಚು ಶಾಖಾ ಮಠಗಳಲ್ಲಿ ಕಾಣುತ್ತದೆ ಎಂದರು.
ಸಮಾರಂಭದಲ್ಲಿ ನಿರಗುಡಿ ಮಲ್ಲಯ್ಯ ಮುತ್ಯಾ, ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಮಾಶಾಳ ಸೇರಿದಂತೆ ವಿವಿಧ ಮಠದ
ಪೀಠಾಧಿಪತಿಗಳು, ಶಾಸಕರಾದ ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ಡಾ.ಅಜಯಸಿಂಗ್, ಸಂಸದ ಡಾ.ಅವಿನಾಶ ಜಾಧವ, ಮುಖಂಡರಾದ ಅಲ್ಲಮ ಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಸಿದ್ಧಶ್ರೀ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜ ಸಿ.ಹಿರೇಮಠ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಪಾರ ಭಕ್ತರು ಸೇರಿದ್ದರು.

ಜಾತ್ಯಾತೀತ ಮಠವಿದು…
ಗುರುವಂದನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಬಯಸಿ ಬಂದ ಪ್ರತಿಯೊಬ್ಬ ಭಕ್ತರನ್ನೂ ಉದ್ದರಿಸಿದ ಗುರು ಪರಂಪರೆಯು ಜಿಡಗಾ ಮಠವಾಗಿದೆ. ಈ ಮಠವು ಜಾತ್ಯಾತೀತ ಹಾಗೂ ಧರ್ಮಾತೀತವಾದ ಪರಪಂಪರೆ ಹೊಂದಿದೆ. ಲಿಂಗೈಕ್ಯ ಸಿದ್ಧರಾಮ ಶಿವಯೋಗಿಗಳು ಇಂದಿಗೂ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಭಕ್ತರ ಕಲ್ಯಾಣಕ್ಕಾಗಿ ಮಠದಿಂದ ನಿರಂತರ ಸೇವಾ ಕಾರ್ಯ ಕೈಗೊಳ್ಳಲಾಗುವುದು ಎಂದು ನುಡಿದರು.