ಜಿಟಿ ಜಿಟಿ ಮಳೆ ಜನಜೀವನ ಅಸ್ತವ್ಯಸ್ತ

ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮಳೆ ಬೀಳುತ್ತಿದ್ದು, ಜನರು ಕೊಡೆ ಹಿಡಿದು ಸಾಗುತ್ತಿರುವುದು.

ಬೆಂಗಳೂರು,ನ.೨೪- ಬೆಂಗಳೂರಿನಲ್ಲಿ ಇಂದು ಬೆಳಗಿನಿಂದಲೇ ತುಂತುರು ಮಳೆ ಮಳೆಯಾಗುತ್ತಿದ್ದು, ಶಾಲಾ-ಕಾಲೇಜು, ಕಚೇರಿಗಳಿಗೆ ತೆರಳುವವರು ಮಳೆಯಿಂದ ಕಷ್ಟಕ್ಕೆ ಸಿಲುಕಿ ಜನಜೀವನ ಅಸ್ತವ್ಯಸ್ತಗೊಂಡಿತು.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ನಿನ್ನೆ ಸಂಜೆ ತುಂತುರು ಮಳೆಯಾಗಿತ್ತು. ಆದರೆ, ಇಂದು ಬೆಳಿಗಿನಿಂದಲೇ ತುಂತುರು ಮಳೆ ಬೀಳುತ್ತಿದೆ. ಸಂಪೂರ್ಣ ಮೋಡಕವಿದಿದ್ದು, ಸೂರ್ಯ ಮರೆಯಾಗಿದ್ದಾನೆ. ಚಳಿಯೂ ಹೆಚ್ಚಿದೆ. ಉಷ್ಣಾಂಶವು ಇಳಿಕೆಯಾಗಿದೆ.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತಮಿಳುನಾಡು ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಗೆ ಕಾರಣವಾಗಿದೆ.
ಶನಿವಾರದವರೆಗೂ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆಯಾಗುತ್ತಿದ್ದು, ಕರಾವಳಿ ಭಾಗದ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಇಂದು ಬೆಳಿಗ್ಗಿನಿಂದಲೇ ನಿರಂತರವಾಗಿ ತುಂತುರು ಮಳೆಯಾಗುತ್ತಿದ್ದು,ಶಾಲಾ-ಕಾಲೇಜು, ಕಚೇರಿಗಳಿಗೆ ತೆರಳುವವರು ಪರದಾಡುವಂತಾಯಿತು ಎಲ್ಲ ಪ್ರಮುಖ ರಸ್ತೆಗಳಲ್ಲೂ ಬಾಹನ ದಟ್ಟಣೆ ಕಂಡು ಬಂದಿದ್ದು, ದ್ವಿಚಕ್ರ ವಾಹನ ಸವಾರರು ರಸ್ತೆಗಳಲ್ಲೇ ಮಳೆಯಿಂದ ತೋಯ್ದರು, ಮಳೆಯಿಂದ ಚಳಿಯೂ ಹೆಚ್ಚಾಗಿದೆ. ಹಾಗಾಗಿ ಕಚೇರಿಗಳಿಗೆ ಬರುವವರು ರೈನ್‌ಕೋಟ್, ಸವಟರ್‌ಗಳನ್ನು ಧರಿಸುವುದು ಅನಿವಾರ್ಯವಾದಂತಾಗಿದೆ.
ನ.೨೭ರವರೆಗೂ ಮಳೆ
ಹವಾಮಾನ ಇಲಾಖೆಯ ಪ್ರಕಾರ ರಾಜ್ಯದ ೨೫ ಜಿಲ್ಲೆಗಳಲ್ಲಿ ನ. ೨೭ರವರೆಗೂ ಮಳೆಯಾಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಜತೆಗೆ ೨೭ರವರೆಗೂ ಚದುರಿದಂತೆ ಮಳೆ ಬೀಳಲಿದೆ.

ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಜಾಗ್ರತೆಯಿಂದ ವಾಹನ ಚಾಲನೆ ಮಾಡಬೇಕು. ಆದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡುವಂತೆ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಎಂ.ಎ. ಸಲೀಂ ಟ್ವಿmರ್‌ನಲ್ಲಿ ನಾಗರಿಕರಿಗೆ ಮನವಿ ಮಾಡಿದ್ದಾರೆ.