ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 25 :- ತಾಲೂಕಿನಲ್ಲಿ ನಾಲ್ಕೈದು ದಿನದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಹಳೆಮನೆಗಳ ಗೋಡೆಕುಸಿದು ಬೀಳುತ್ತಿರುವ ಘಟನೆ ಜರುಗಿದ್ದು ಇದುವರೆಗೆ 11 ಮನೆಗಳು ಭಾಗಶಃ ಹಾನಿಯಾಗಿರುವ ವರದಿಯಾಗಿದ್ದು ಯಾವುದೇ ಜನಜಾನುವಾರುಗಳ ಪ್ರಾಣಹಾನಿಯಾಗಿರುವುದಿಲ್ಲ ಎಂದು ತಾಲೂಕು ಕಚೇರಿಯ ಮೂಲಗಳಿಂದ ಮಾಹಿತಿ ತಿಳಿದಿದೆ.
ತಾಲೂಕಿನ ಹೊಸಹಳ್ಳಿ ಹೋಬಳಿಯಲ್ಲಿ ಶಾಂತನಹಳ್ಳಿ 2, ಚಿಕ್ಕಕುಂಬಳಗುಂಟೆ 1, ಟಿ ಸೂರವ್ವನಹಳ್ಳಿ 1, ಜುಟ್ಟಲಿಂಗನಹಟ್ಟಿ 1, ಕೆಂಚಮಲ್ಲನಹಳ್ಳಿ 1ಸೇರಿದಂತೆ ಆರು ಮನೆಗಳು, ಗುಡೇಕೋಟೆ ಹೋಬಳಿಯಲ್ಲಿ ಕಡಾಕೊಳ್ಳ ಬಣಕಾರ ಈರಮ್ಮಹಾಗೂ ಹಾಲಸಾಗರ ಗ್ರಾಮ ಸೇರಿದಂತೆ ಮೂರು ಮನೆಗಳ ಗೋಡೆಕುಸಿದಿವೆ ಮತ್ತು ಕೂಡ್ಲಿಗಿ ಹೋಬಳಿಯಲ್ಲಿ ಬಡೇಲಡಕು, ಶಿವಪುರ ಮತ್ತು ಪಟ್ಟಣದಲ್ಲಿ ತಲಾ ಒಂದರಂತೆ ಮೂರು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು ಮನೆಯಲ್ಲಿದ್ದವರು ಮುನ್ನೆಚ್ಚರಿಕೆಯಾಗಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದರೆಂದು ಹೇಳಬಹುದಾಗಿದೆ. ಆಯಾ ಭಾಗದ ಕಂದಾಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಪ್ರಾಥಮಿಕ ಮಾಹಿತಿ ನೀಡಿದಂತೆ ತಾಲೂಕಿನಲ್ಲಿ ಭಾಗಶಃ 11 ಮನೆಗಳು ಹಾನಿಯಾಗಿವೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.