ಜಿಟಿ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.20:- ನಗರದಲ್ಲಿ ಮಳೆ ಮುಂದುವರಿದಿದ್ದು, ಭಾನುವಾರ ದಿನವಿಡೀ ಸುರಿದ ಜಿಟಿ ಜಿಟಿ ಸೋನೆ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇತ್ತು. ಬೆಳಗ್ಗೆ 9.30 ಗಂಟೆಗೆ ವೇಳೆಗೆ ಸೋನೆಯೊಂದಿಗೆ ಆರಂಭವಾದ ಮಳೆ ನಂತರ ಜೋರಾಗಿಯೇ ಸುರಿಯಿತು. ಪರಿಣಾಮ, ತಗ್ಗು ಪ್ರದೇಶಕ್ಕೆ ನೀರು ಹರಿಯಿತು. ಕೊಂಚ ಕಾಲದ ಬಿಡುವಿನ ನಂತರ ಶುರುವಾದ ಜಿಟಿಜಿಟಿ ಮಳೆ ಆಗೊಮ್ಮೆ, ಈಗೊಮ್ಮೆ ಜೋರಾಗಿ ಸುರಿದಿದ್ದು, ಮೈಸೂರು ಮಲೆನಾಡಿನಂತೆ ಗೋಚರವಾಯಿತು.
ದಿನವಿಡೀ ಮೋಡ ಕವಿದ ವಾತಾವರಣವಿತ್ತು. ತಾಪಮಾನ ಕಡಿಮೆಯಾಗಿ ಹಿತಕರವಾದ ತಂಪುಗಾಳಿ ಬೀಸಿತು. ಇದರಿಂದ ಮನೆ ಮೂಲೆ ಸೇರಿದ್ದ ಸ್ವೆಟರ್, ಜರ್ಕಿನ್, ಕೈಗವಸುಗಳನ್ನು ಹೊರತೆಗೆದು ಧರಿಸಿಕೊಂಡ ಜನರು, ಚಳಿಯಿಂದ ರಕ್ಷಿಸಿಕೊಂಡು ಬೆಚ್ಚಗಾದರು. ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದ ಕಾರಣ ಸಂಚರಿಸಲು ವಾಹನ ಸವಾರರು ಹರಸಾಹಸಪಟ್ಟರು. ಸಾಕಷ್ಟು ಜನ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದು, ಮಳೆ ನಿಂತ ನಂತರ ತೆರಳಿದರು. ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು, ಜನರಲ್ಲಿ ಮಂದಹಾಸ ಮೂಡಿಸಿದೆ.
ವಿದ್ಯಾರಣ್ಯಪುರಂ, ಕುವೆಂಪುನಗರ, ಜೆ.ಪಿ.ನಗರ, ಅಗ್ರಹಾರ, ಶಾರದಾದೇವಿನಗರ, ಬೋಗಾದಿ, ಕನಕದಾಸನಗರ, ಜನತಾನಗರ ಸೇರಿದಂತೆ ಹಲವೆಡೆ ಹೆಚ್ಚಾಗಿ ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ, ಮೋರಿ, ಒಳಚರಂಡಿಗಳಲ್ಲಿ ನೀರು ಹರಿಯಿತು. ನಗರದ ಹೃದಯ ಭಾಗ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಸಯ್ಯಜಿರಾವ್ ರಸ್ತೆ, ಶಿವರಾಂಪೇಟೆ, ಡಿ.ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲೂ ನೀರು ಹರಿಯಿತು.