ಜಿಟಿಟಿಸಿ ವಸತಿಗೃಹ ಮತ್ತು ತರಬೇತಿ ಕಟ್ಟಡಕ್ಕೆ ಶಾಸಕ ಕೆ.ಸಿ. ವೀರೇಂದ್ರ ಭೂಮಿಪೂಜೆ

ಚಿತ್ರದುರ್ಗ ಜೂ.20;   ಚಿತ್ರದುರ್ಗದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವಿದ್ಯಾರ್ಥಿಗಳ ವಸತಿಗೃಹ ಮತ್ತು ತರಬೇತಿ ಕಟ್ಟಡದ ಭೂಮಿಪೂಜೆ ಕಾರ್ಯವನ್ನು ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ನೆರವೇರಿಸಿದರು.ಬಳಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಸಿ. ವೀರೇಂದ್ರ ಅವರು, ಚಿತ್ರದುರ್ಗದಲ್ಲಿನ ಜಿಟಿಟಿಸಿ ತರಬೇತಿ ಕೇಂದ್ರದಲ್ಲಿ ಉತ್ತಮ ಕೋರ್ಸ್‍ಗಳ ವ್ಯಾಸಂಗಕ್ಕೆ ಅವಕಾಶವಿದೆ.  ಈ ಕೋರ್ಸ್ ಮುಗಿದ ನಂತರ ವಿದ್ಯಾರ್ಥಿಗಳು ಇನ್ನು ಮುಂದೆ ಬೇರೆ ಪ್ರದೇಶಗಳಿಗೆ ಕೈಗಾರಿಕೆಗಳನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ, ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಹಲವಾರು ಕೈಗಾರಿಕೆಗಳು ತಲೆದೋರಲಿವೆ ಎಂದು ತಿಳಿಸಿದ ಅವರು ತರಬೇತಿ ಕೇಂದ್ರಕ್ಕೆ ಕೆಎಸ್‍ಆರ್‍ಟಿಸಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.  ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ತರಬೇತಿ ವಿಭಾಗ ಮತ್ತು ಕಾರ್ಯಗಾರವನ್ನು ವೀಕ್ಷಿಸಿ ನಂತರ ವಸತಿ ಗೃಹ ಕಟ್ಟುವಂತಹ ಸ್ಥಳಕ್ಕೆ ಭೇಟಿ ನೀಡಿ ಭೂಮಿ ಪೂಜೆ ನೆರವೇರಿಸಿದರು. ಪ್ರಾಂಶುಪಾಲ ಕೆ. ಬಿ. ಅರುಣ್‍ಕುಮಾರ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಕಾಲೇಜು ಆಡಳಿತಾಧಿಕಾರಿ ಕೆ.ಪಿ. ಕಾಟೇಗೌಡ ತರಬೇತಿ ಕೇಂದ್ರದ ಕಿರು ಪರಿಚಯ ಹಾಗೂ ಪಕ್ಷಿನೋಟವನ್ನು ವಿವರಿಸಿದರು.  ಶಶಿಧರ ಕೆ ಅಂಗಡಿ ಸ್ವಾಗತಿಸಿದರು.  ಕುಂಚಿಗನಾಳ್ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.  ಕಾಲೇಜಿನ ಸಿಬ್ಬಂದಿಗಳಾದ ಡಿ. ಎಚ್. ಮಂಜುನಾಥ, ಶಶಿಧರ ಕೆ ಅಂಗಡಿ, ಚೇತನ್ ಟಿ, ಎನ್. ಅಜಯ್‍ಕುಮಾರ್, ಶಮಾಎಸ್ ಎ, ಸಚಿನ್ ಸಿ ಎಸ್, ಹಾಗೂ ಸತೀಶ್ ಎಮ್.ಎನ್ ಉಪಸ್ಥಿತರಿದ್ದರು.