ಜಿಎಸ್ ಟಿ ಪರಿಹಾರ ಅವಧಿ ವಿಸ್ತರಣೆಗೆ ಕೇಂದ್ರ ಸರ್ಕಾರ ನಕಾರ:ಸಿಎಂ

ಬೆಂಗಳೂರು, ಜು.20- ರಾಜ್ಯಗಳಿಗೆ ನೀಡುವ ಸರಕು ಮತ್ತು ಸೇವಾ ತೆರಿಗೆ- ಜಿ.ಎಸ್.ಟಿ ಪರಿಹಾರದ ಅವಧಿ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.

ಜಿಎಸ್ ಎಸ್ ಪರಿಹಾರದ ಅವಧಿ ಮುಗಿದಿರುವ‌ ಹಿನ್ನೆಲೆಯಲ್ಲಿ ಮತ್ತಷ್ಟು ವರ್ಣ ಮುಂದುವರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಇದೀಗ ಕೇಂದ್ರ ಪರಿಹಾರ ವಿಸ್ತರಣೆಗೆ ಅವಕಾಶವಿಲ್ಲ ಎಂದಿರುವುದು ರಾಜ್ಯಗಳಿಗೆ ನಿರಾಸೆಯಾಗಿದೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾನೂನಿನ ಅನ್ವಯ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ
ಎಂದು ಹೇಳಿದ್ದಾರೆ.

ಎಲ್ಲಾ ಪಕ್ಷಗಳು, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ಮಾಡಿ ರೂಪಿಸಿರುವ ಕಾಯ್ದೆ ಜಿ.ಎಸ್.ಟಿ. ಕಾಯ್ದೆ ರೂಪಿಸಿದಾಗಲೇ ಐದು ವರ್ಷಕ್ಕೆ ಜಿ.ಎಸ್.ಟಿ ಪರಿಹಾರವನ್ನು ನಿಗದಿ ಮಾಡಲಾಗಿತ್ತು. ಕೋವಿಡ್ ಬಂದಂಥ ಸಂದರ್ಭದಲ್ಲಿಯೂ ಕೂಡ ಯಾವುದೇ ರೀತಿಯ ಸಂಗ್ರಹವಾಗದಿದ್ದರೂ ಪರಿಹಾರವನ್ನು ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಹೇಳಿದ್ದಾರೆ.

ಎಲ್ಲಾ ರಾಜ್ಯಗಳು ಎರಡು ವರ್ಷ ವಿಸ್ತರಣೆ ಮಾಡಲು ಕೋರಿದ್ದೆವು. ಆದರೆ, ಕಾನೂನಿನ ಅನ್ವಯ ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಬಾಕಿ ಇದ್ದ 8800 ಕೋಟಿ ರೂ.ಗಳನ್ನು ನೀಡಿದ್ದಾರೆ. ಅದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಕುರಿತು ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಆಯೋಗ ತನ್ನ ವರದಿ ನೀಡಿದ ಕೂಡಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಶೀಘ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನಂತರ ನ್ಯಾಯಾಲಯದ ನಿರ್ದೇಶನದ ಅನುಗುಣವಾಗಿ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಮೈಸೂರು ಮೇಯರ್ ಚುನಾವಣೆ ಹಿಂದುಳಿದ ಆಯೋಗದ ವರದಿ ಬಂದ ಕೂಡಲೇ ನಡೆಸಲಾಗುವುದು ಎಂದು ತಿಳಿಸಿದರು.

ಬಾಗಿನ ಅರ್ಪಣೆ:

ಇಂದು ಚಾಮುಂಡೇಶ್ವರಿ ದೇವಿ ವರ್ಧಂತಿಯ ಸಮಾರಂಭದಲ್ಲಿ ಭಾಗವಹಿಸಿ, ಚ್ಚಾಮುಂಡೇಶ್ವರಿಯ ಆಶೀರ್ವಾದ ಪಡೆದುಕೊಂಡು ಕಬಿನಿ ಮತ್ತು ಕೆ.ಆರ್.ಎಸ್.ನಲ್ಲಿ ಬಾಗಿನ ಅರ್ಪಣೆ ಮಾಡಿದರು.

ಆಷಾಢ ಮಾಸದಲ್ಲಿ ಕೆ.ಆರ್.ಎಸ್, ಕಬಿನಿ ಎರಡೂ ತುಂಬಿರುವುದು ಬಹಳ ಅಪರೂಪ. ಮಳೆ ಎಲ್ಲೆಡೆ ಉತ್ತಮವಾಗಿ ಆಗಿದ್ದು, ರೈತರು ತಮ್ಮ ಹೊಲ ಗದ್ದೆ ಗಳಲ್ಲಿ ಕೆಲಸ ಮಾಡಲು ಅನುಕೂಲವಾಗಿದೆ ಎಂದರು.