ಜಿಎನ್‍ಡಿ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಬೀದರ್:ಮೇ.14:ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಬೆಳವಣಿಗೆಯಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿದೆ ಎಂದು ಬೆಂಗಳೂರಿನ ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ, ಚಂದ್ರಯಾನ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ. ಚಂದ್ರಕಾಂತಕುಮಾರ ಇಲ್ಲಿ ಹೇಳಿದರು.

ನಗರದ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಹಮ್ಮಿಕೊಂಡಿದ್ದ ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಶನ್ ಮತ್ತು ಕಂಪ್ಯೂಟಿಂಗ್‍ನಲ್ಲಿನ ಪ್ರಗತಿ ಕುರಿತಾದ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ದೇಶದ ಜಿಡಿಪಿ ಬೆಳವಣಿಗೆಗೆ ತಂತ್ರಜ್ಞಾನ ಕ್ಷೇತ್ರವು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು. ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗುರುನಾನಕ್ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಂಶೋಧನೆಯನ್ನು ತಿಳಿದುಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ನೆರವಾಗುತ್ತವೆ ಎಂದರು. ತಾಂತ್ರಿಕ ಮತ್ತು ಸಂಶೋಧನಾ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಲು ವಿಚಾರ ಸಂಕಿರಣ ನೆರವಾಗುತ್ತದೆ ಎಂದರು.

ಪ್ರಾಚಾರ್ಯ ಡಾ.ಧನಂಜಯ್, ಇಸಿಇ ವಿಭಾಗದ ಮುಖ್ಯಸ್ಥ ಡಾ.ಕಿಶನ್ ಸಿಂಗ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ವೀರೇಂದ್ರ ಡಿ. ಮತ್ತಿತರರು ಉಪಸ್ಥಿತರಿದ್ದರು. ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.