ಜಿಎಂ ಫಾರ್ಮಸಿ ಕಾಲೇಜಿನಲ್ಲಿ ಅಂತರ ವಲಯ ಕಬಡ್ಡಿ ಪಂದ್ಯಾವಳಿ

ದಾವಣಗೆರೆ. ; ನಗರದ  ಜಿಎಂ ಫಾರ್ಮಸಿ ಕಾಲೇಜಿನಲ್ಲಿ ಅಂತರ ವಲಯ ಕಬ್ಬಡ್ಡಿ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಅಡಿಯಲ್ಲಿ ಬೆಳಗಾಂ ಜೋನ್ ಅಂತರ ವಲಯ ಕಬ್ಬಡ್ಡಿ ಪಂದ್ಯಾವಳಿಗಳು ಇದೇ ಮೊದಲ ಬಾರಿ ಜಿಎಂ ಫಾರ್ಮಸಿ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಸುಮಾರು ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಬೆಂಗಳೂರು, ಚಿತ್ರದುರ್ಗ, ಗದಗ ದಾವಣಗೆರೆ, ಬಳ್ಳಾರಿ ಹೀಗೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಅವರವರ ತರಬೇತುದಾರರೊಂದಿಗೆ ಪಾಲ್ಗೊಂಡಿದ್ದರು ಎಂದು ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ ಗಿರೀಶ್ ಬೋಳಕಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಆಟಗಾರರಿಗೂ ಎಲ್ಲ ರೀತಿಯ ಸೌಲಭ್ಯವನ್ನು ಒದಗಿಸಿದ್ದು, ಯಾವುದೇ ಅಡಚಣೆಗೂ ಅವಕಾಶವನ್ನು ಕೊಡದೆ ವ್ಯವಸ್ಥಿತವಾಗಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದ್ದು, ಪಂದ್ಯಾವಳಿಗಳು ಯಶಸ್ವಿಯಾಗಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು. ಉದ್ಘಾಟನಾ ಸಮಾರಂಭವು ಕಾಲೇಜಿನ ಮೈದಾನದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ನಿಮ್ಮತನವನ್ನು ಬೆಳೆಸಿಕೊಂಡು ಮುಂದೆ ಸಾಗುವಂತೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ ಗಿರೀಶ್ ಬೋಳಕಟ್ಟಿ, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್, ಜಿಎಂಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ ಬಿಆರ್ ಶ್ರೀಧರ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್, ವಿವಿಧ ತಂಡಗಳ ತರಬೇತುದಾರರುಗಳು, ದೈಹಿಕ ಶಿಕ್ಷಣಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.