ಜಿಎಂಐಟಿ ವಿದ್ಯಾರ್ಥಿಗಳಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಅನಾವರಣ


ದಾವಣಗೆರೆ.ನ.೧೪; ಇದು ವಿದ್ಯಾರ್ಥಿಗಳಿಂದಲೇ ತಯಾರಾದ ವಾಹನ, ಹೌದು ನಗರದ ಜಿ ಎಂ ಐ ಟಿ ತಾಂತ್ರಿಕ ಮಹಾ ವಿದ್ಯಾಲಯದ ಯಾಂತ್ರಿಕ ವಿಭಾಗದ ೩೨ ವಿದ್ಯಾರ್ಥಿಗಳು ತಮಗೆ ಏರ್ಪಡಿಸಿದ್ದ ಇಂಟರ್ನ್‌ಶಿಪ್ ತರಬೇತಿಯಲ್ಲಿ ಎರಡು ವಿದ್ಯುತ್ ಚಾಲಿತ ವಾಹನಗಳನ್ನು ರಸ್ತೆಯ ಮೇಲೆ, ದೈನಂದಿನ ಉಪಯೋಗಕ್ಕೆ ಬಳಸುವ ಹಾಗೆ ತಯಾರಿಸಿದ್ದಾರೆ.

ಈ ವಾಹನಗಳನ್ನು ಶ್ರೀ ಶೈಲ ವಿದ್ಯಾಸಂಸ್ಥೆಯ ಛೇರ್ಮನ್‌ರವರಾದ ಜಿ ಎಂ ಲಿಂಗರಾಜು ರವರು ಬಿಡುಗಡೆ ಮಾಡಿದರು, ಅವರು ಈ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತಾ, ವಾಹನದ ವಿನ್ಯಾಸವನ್ನು ನೋಡಿ ವಿದ್ಯಾರ್ಥಿಗಳಿಗೆ ಜನರ ಸಹಭಾಗಿತ್ವದಲ್ಲಿ ಹೊಸ ಉದ್ಯಮವನ್ನು ಸ್ಥಾಪಿಸುವ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು,ಅಲ್ಲದೇ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಅನುಕೂಲವಾಗುವಂತೆ ನಗರದ ಕೆಲವು ಭಾಗಗಳಲ್ಲಿ ಈ ವಾಹನಗಳನ್ನು ಮೊಬೈಲ್ ಆಪ್ ಬಳಸಿ ಜನಸಾಮಾನ್ಯರು ಉಪಯೋಗಿಸುವಂತೆ ಮಾಡಲು ಕೆಲವು ವಿಚಾರಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಪ್ರಾಂಶುಪಾಲರಾದ ಡಾ. ವೈ ವಿಜಯ ಕುಮಾರ್‌ರವರು ಶ್ಲಾಘಿಸಿದರು ಮತ್ತು ವಿದ್ಯಾರ್ಥಿಗಳಿಗೆ ವಾಹನಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದ ರೋವ್ ಲ್ಯಾಬ್ಸ್ ನ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಸನ್ಮಾಸಿದರು. ವಿಭಾಗದ ಮುಖ್ಯಸ್ಥರಾದ ಡಾ. ಸಿ ವಿ ಶ್ರೀನಿವಾಸ ರವರು “ಸೆಂಟರ್ ಫಾರ್ ಮೊಬಿಲಿಟಿ ಇನೋವೇಷನ್” ನ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ದೊಡ್ಡೇಶಿ ಬಿ ಸಿ ರವರು ಆಯೋಜಿಸಿದ್ದರು.