ಜಿಎಂಐಟಿ: “ಮಲ್ಲಿಕಾ 2022” ವಾರ್ಷಿಕೋತ್ಸವಕ್ಕೆ ಅದ್ದೂರಿಯ ತೆರೆ

ದಾವಣಗೆರೆ. ಜು.೨೬; ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಮಲ್ಲಿಕಾ 2022ರ ಕ್ರೀಡಾ ಮತ್ತು ಸಾಂಸ್ಕೃತಿಕ ವಾರ್ಷಿಕೋತ್ಸವ  ಅದ್ದೂರಿಯಿಂದ ಆಚರಿಸಲಾಯಿತು. ಕಾಲೇಜಿನ  ಜಿ ಮಲ್ಲಿಕಾರ್ಜುನಪ್ಪ ತೆರೆದ ಸಭಾಂಗಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು. ಎರಡು ದಿನಗಳ ವಾರ್ಷಿಕೋತ್ಸವದಲ್ಲಿ 22ಕ್ಕೂ ಹೆಚ್ಚು ಸಂಸ್ಕೃತಿಕ ಚಟುವಟಿಕೆಗಳು ನಡೆದವು. ಕಾಲೇಜಿನ ಆವರಣದಲ್ಲಿ ಸಂಭ್ರಮದ ಹಬ್ಬದ ವಾತಾವರಣ ಸೃಷ್ಟಿಸಿತ್ತು. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡು ಎರಡು ದಿನಗಳ ವಾರ್ಷಿಕೋತ್ಸವವನ್ನು ಯಶಸ್ವಿಗೊಳಿಸಿದರು. ಮಲ್ಲಿಕಾ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ಲೋಕಸಭಾ ಸದಸ್ಯರಾದ ಡಾ ಜಿಎಂ ಸಿದ್ದೇಶ್ವರ ಮಾತನಾಡಿ, ಪ್ರತಿವರ್ಷ ಶೇಕಡ 90ಕ್ಕೂ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ಪದಕವನ್ನು ನೀಡುತ್ತಾ ಬಂದಿದ್ದು, ಈ ದಿನ 11 ವಿದ್ಯಾರ್ಥಿಗಳು 12 ಚಿನ್ನದ ಪದಕಗಳನ್ನು ಪಡೆಯುತ್ತಿದ್ದು ಸಂತಸದ ವಿಷಯವಾಗಿದೆ ಮತ್ತು ಇದೇ ಮೊದಲ ಬಾರಿ 27 ವಿದ್ಯಾರ್ಥಿಗಳು ಬೆಳ್ಳಿಯ ಪದಕವನ್ನು ಪಡೆಯುತ್ತಿರುವುದು ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಮತ್ತೊಬ್ಬ ಅತಿಥಿ ಹೆಸರಾಂತ ಸ್ಯಾಕ್ಸೋಫೋನ್ ಕ್ಲಿಯರ್ ವಿದ್ವಾನ್ ಶ್ರೀಧರ್ ಸಾಗರ್ ಮಾತನಾಡಿ, ಈ ರೀತಿ ಕಾರ್ಯಕ್ರಮವನ್ನು ಮಾಡುವ ಮುಖಾಂತರ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಕಲೆಯನ್ನು ಹೆಚ್ಚಿಸುತ್ತಿರುವುದು ಶ್ಲಾಘನೀಯ ಮತ್ತು ಕಾಲೇಜಿನ ವಾತಾವರಣವೂ ಅದಕ್ಕೆ ಪೂರಕವಾಗಿದೆ ಎಂದು ತಿಳಿಸಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹಾಂತೇಶ್ ಬೀಳಗಿ ರವರಿಗೆ ಇದೇ ವೇಳೆ ಸನ್ಮಾನಿಸಲಾಯಿತು ಜೊತೆಗೆ ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಶ್ಯಂತ್ ಅವರಿಗೆ ಇದೇ ವೇಳೆ ಗೌರವವನ್ನು  ಸಮರ್ಪಿಸಲಾಯಿತು. ಜಿ ಸರಿಗಮಪ ರಿಯಾಲಿಟಿ ಶೋನ ಫೈನಲಿಸ್ಟ್ ಗಳಾದ ಕುಮಾರಿ ವರ್ಣ ಚೌಹಾನ್, ಕುಮಾರಿ ನೇಹಾ ಶಾಸ್ತ್ರಿ ಮತ್ತು ಅಶ್ವಿನ್ ಶರ್ಮ ವಿವಿಧ ಚಲನಚಿತ್ರ ಗೀತೆಗಳಿಗೆ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ವಿದ್ಯಾರ್ಥಿಗಳೊಡನೆ ಬೆರೆತು ಮೈಮರೆತು ಹಾಡಿದ್ದು, ಸಭಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಕಾಲೇಜಿನ ಚೇರ್ಮನ್ ಶ್ರೀ ಜಿಎಂ ಲಿಂಗರಾಜು ಮಾತನಾಡಿ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಎಲ್ಲಾ ಅನುಕೂಲತೆಗಳನ್ನು ಒದಗಿಸಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುವುದರ ಮೂಲಕ ತಮ್ಮ ಪೋಷಕರಿಗೆ ಮತ್ತು ಸಂಸ್ಥೆಗೆ ಕೀರ್ತಿಯನ್ನು ತರಬೇಕೆಂದು ತಿಳಿಹೇಳಿದರು. ಈ ವರ್ಷದ ಪ್ಲೇಸ್ಮೆಂಟ್ಸ್ ಅತ್ಯುತ್ತಮವಾಗಿ ಹೊರಹೊಮ್ಮಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಆಫರ್ ಲೆಟರ್ ಹೊಂದಿರುವುದು ಸಂತೋಷವಾಗಿದೆ ಎಂದು ತಿಳಿಸಿದರು. ನಂತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರು ಗಳಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಶುಕ್ರವಾರದ ಸಂಜೆಯ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ವಿತರಣೆಯನ್ನು ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ನ ಸದಸ್ಯರಾದ  ಜಿಎಸ್ ಅನೀತ್ ಕುಮಾರ್ ನೆರವೇರಿಸಿಕೊಟ್ಟರು. ಸಮಾರೋಪದ ಕಾರ್ಯಕ್ರಮದಲ್ಲಿ  ಸಂಸದರಾದ ಡಾ ಜಿಎಂ ಸಿದ್ದೇಶ್ವರ, ಜಗಳೂರಿನ ಶಾಸಕರಾದ  ಎಸ್ ವಿ ರಾಮಚಂದ್ರ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ  ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ  ಸಿ ಬಿ ರಿಶ್ಯಂತ್, ಕಾಲೇಜಿನ ಚೇರ್ಮನ್  ಜಿಎಂ ಲಿಂಗರಾಜು, ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್, ಸ್ಯಾಕ್ಸೋಫೋನ್ ಪ್ಲೇಯರ್ ವಿದ್ವಾನ್ ಬೀದರ್ ಸಾಗರ್, ಮಲ್ಲಿಕಾ ಸಂಚಾಲಕರಾದ ಡಾ ಸುನಿಲ್ ಕುಮಾರ್ ಬಿಎಸ್, ಸಂಯೋಜಕರಾದ ಕೊಟ್ರೇಶಿ ಎಸ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

Attachments area