ಜಿಎಂಐಟಿಯಲ್ಲಿ ಸುಕಲ್ಪ ತಾಂತ್ರಿಕ ಉತ್ಸವ

ದಾವಣಗೆರೆ. ಜೂ.೨೨; ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ರಾಜ್ಯಮಟ್ಟದ ಎರಡು ದಿನಗಳ ತಾಂತ್ರಿಕ ಉತ್ಸವ “ಸುಕಲ್ಪ-2023” ಗೆ ಅದ್ದೂರಿ ಚಾಲನೆ ನೀಡಲಾಯಿತು. ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಂಡ್ಯದ ಪಿ ಇ ಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಮತ್ತು ಪ್ಲೇಸ್ಮೆಂಟ್ ಆಫೀಸರ್ ಡಾ ವಿನಯ್ ಎಸ್ ಆಗಮಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳು ಶೈಕ್ಷಣಿಕದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು ಮತ್ತು ಮುಂಬರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕೆಂದು ಕರಿಕೊಟ್ಟರು. ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಹೇಳಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಹಲವು ತಾಂತ್ರಿಕ ಚಟುವಟಿಕೆಗಳ ಸ್ಪರ್ಧಾ ವಿಭಾಗಕ್ಕೆ ಕರ್ನಾಟಕ ರಾಜ್ಯದ ವಿವಿಧ ಕಾಲೇಜುಗಳ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿಭಾಗದ ವಿದ್ಯಾರ್ಥಿಗಳು ವಿವಿಧ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸುತ್ತಾ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುವಲ್ಲಿ ನಿರತರಾಗಿದ್ದರು. ವಿಭಾಗದ ಮುಖ್ಯಸ್ಥರಾದ ಡಾ ಸುನಿಲ್ ಕುಮಾರ್ ಬಿಎಸ್ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ನೆರವೇರಿಸಿದರು. ಎಲ್ಲಾ ಚಟುವಟಿಕೆಗಳು ಅತಿ ಮುಖ್ಯ, ಎಲ್ಲ ವಿದ್ಯಾರ್ಥಿಗಳು  ಲವಲವಿಕೆ ಇಂದ ಪಾಲ್ಗೊಂಡು ತಮ್ಮ ಸ್ಪರ್ಧಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆಕೊಟ್ಟರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಅಧಿಕಾರಿ  ವೈ ಯು ಸುಭಾಷ್ ಚಂದ್ರ, ಪ್ರಾಂಶುಪಾಲರಾದ  ಡಾ ಸಂಜಯ್ ಪಾಂಡೆ ಎಂಬಿ, ವಿಭಾಗದ ಮುಖ್ಯಸ್ಥರಾದ ಡಾ ಸುನಿಲ್ ಕುಮಾರ್ ಬಿಎಸ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ  ತೇಜಸ್ವಿ ಕಟ್ಟಿಮನಿ ಟಿ ಆರ್, ಕಾರ್ಯಕ್ರಮದ ಸಂಯೋಚಕರುಗಳಾದ ಡಾ ನೀಲಾಂಬಿಕೆ ಎಸ್, ಪ್ರೊ  ನಸ್ರೀನ್ ತಾಜ್ ಎನ್‌ಬಿ, ಯು ಬಿ ಡಿ ಟಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ ವೀರಪ್ಪ, ಪ್ರಾಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.