ಜಿಎಂಐಟಿಯಲ್ಲಿ  ರಾಜ್ಯಮಟ್ಟದ ಐಎಸ್ ಟಿಇ ವಿದ್ಯಾರ್ಥಿ ಸಮಾವೇಶ

ದಾವಣಗೆರೆ. ಜು.೨೫; ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ರಾಜ್ಯಮಟ್ಟದ ಐಎಸ್ ಟಿಇ ವಿದ್ಯಾರ್ಥಿ ಸಮಾವೇಶವು ಬಹಳ ಅದ್ದೂರಿಯಿಂದ ನೆರವೇರಿತು.ಸಮಾವೇಶದಲ್ಲಿ ಐಎಸ್ ಟಿಇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪದಾಧಿಕಾರಿಗಳು ಭಾಗವಹಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳು ಸುಮಾರು 12ಕ್ಕೂ ಹೆಚ್ಚು ವಿವಿಧ ತಾಂತ್ರಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ  ಕಾರ್ಯಕ್ರಮದ ಉದ್ಘಾಟನೆಯನ್ನು ವಿಟಿಯು ಬೆಳಗಾವಿ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ ಬಿ ಇ ರಂಗಸ್ವಾಮಿ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ನಂತರ ಮಾತನಾಡಿದ ಇವರು, ಇಂದಿನ ಯುವಪೀಳಿಗೆ ಭಾರತದ ಶಕ್ತಿ, ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಭಾರತವು ಒಂದು. ವೈಜ್ಞಾನಿಕವಾಗಿ ಶೈಕ್ಷಣಿಕವಾಗಿ ಭಾರತವು ಶಕ್ತಿಶಾಲಿ ರಾಷ್ಟ್ರವಾಗಿದ್ದು, ಯುವಕರೇ ಇದರ ಶಕ್ತಿ, ಭಾರತವನ್ನು ಮುನ್ನಡೆಸುವ ಜವಾಬ್ದಾರಿ ಯುವಪೀಳಿಗೆಯ ಮೇಲೆ ನಿಂತಿದೆ. ಕರೋನಾ ಹೆಮ್ಮಾರಿಯು ವಕ್ಕರಿಸಿದ್ದಾಗ, ಭಾರತವು ತೆಗೆದುಕೊಂಡ ಹಲವಾರು ದಿಟ್ಟತನದ ನಿರ್ಧಾರಗಳು ನಿದರ್ಶನಗಳಾಗಿವೆ. 200 ಕೋಟಿಗೂ ಅಧಿಕ ವ್ಯಾಕ್ಸಿನೇಷನ್ ನೀಡಿ ಭಾರತವನ್ನು ಅಪಾಯದಿಂದ ದೂರ ಮಾಡಿದ್ದಲ್ಲದೆ ಇತರ ದೇಶಗಳಿಗೂ ಔಷಧಿಯನ್ನು ರವಾನೆ ಮಾಡಿ ಸೈ ಎನಿಸಿಕೊಂಡ ದೇಶ ನಮ್ಮದು ಎಂದು ಇದೇವೇಳೆ ತಿಳಿಸಿದರು.ಕರ್ನಾಟಕ ಐಎಸ್ ಟಿಇ ಚೇರ್ಮನ್ ಮತ್ತು ಸಿಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ಡಿ ಎಸ್ ಸುರೇಶ್ ಮಾತನಾಡಿ, ಸಹಕಾರ, ಸಮನ್ವಯ ಮತ್ತು ಸಹಯೋಗ ಇದ್ದಲ್ಲಿ ನಾವು ಏನು ಬೇಕಾದರೂ ಸಾಧಿಸಬಹುದು, ಐಎಸ್ ಟಿಇ ಕರ್ನಾಟಕ ಸೆಕ್ಷನ್ ಹಲವು ವಿದ್ಯಾರ್ಥಿ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳ ಪ್ರತಿಕ್ರಿಯೆಯು ಉತ್ತಮವಾಗಿದೆ. ಈ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ಆಯೋಜಿಸಿದ ಜಿಎಂಐಟಿ ಕಾಲೇಜಿನ ಅಧ್ಯಾಪಕ ವರ್ಗದವರು ಮತ್ತು ಪ್ರಾಂಶುಪಾಲರಿಗೆ ಅಭಿನಂದನೆಗಳನ್ನು ತಿಳಿಸಿದರು.