ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಬೇಕಿತ್ತೇ…?

ಮೈಸೂರು:ಏ:29: ಬಳ್ಳಾರಿಯ ಸಂಡೂರಿನಲ್ಲಿ ಜಿಂದಾಲ್ ಕಂಪನಿಗೆ 3,666 ಎಕರೆ ಸರ್ಕಾರಿ ಭೂಮಿ ಪರಭಾರೆ ಮಾಡಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಇಡೀ ರಾಜ್ಯ ಕೊರೊನಾ ಸೋಂಕಿನ ಆರ್ಭಟದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ತರಾತುರಿಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ನೀಡಿರುವುದು ಸರಿಯಾದ ಕ್ರಮವಲ್ಲ. ಈ ಹಿಂದೆ ಇದೇ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಜಿಂದಾಲ್ ಕಂಪನಿಗೆ ಭೂಮಿ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಗಲು ರಾತ್ರಿ ಧರಣಿ ನಡೆಸಿದ್ದರು. ಆದರೀಗ ತರಾತುರಿಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವ ಅಗತ್ಯವೇನಿತ್ತು? ಇಡೀ ಕರ್ನಾಟಕ ರಾಜ್ಯ ಕೊರೊನಾ ಸೋಂಕಿನ ಆರ್ಭಟದಿಂದ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಯಾರೂ ಗಮನಿಸುವುದಿಲ್ಲ ಎಂದುಕೊಂಡು ಕದ್ದು ಮುಚ್ಚಿ ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಮಾರಾಟ ಮಾಡಲಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಆಕ್ಷೇಪಿಸಿದರು.
ರಾಜ್ಯ ಸರ್ಕಾರವು ಜಿಂದಾಲ್ ಕಂಪನಿಗೆ ಈ ಭೂಮಿಯನ್ನು ಪ್ರತಿ ಎಕರೆಗೆ 1.22 ಲಕ್ಷ ರೂ.ಗಳಂತೆ ಮಾರಾಟ ಮಾಡಿದೆ. ಆದರೆ ಅದರ ಇಂದಿನ ದರ ಪ್ರತಿ ಎಕರೆಗೆ 3 ಲಕ್ಷಕ್ಕೂ ಹೆಚ್ಚು ಇದೆ. ಈ ಭೂಮಿಯಲ್ಲಿ ಅಪಾರವಾದ ನಿಕ್ಷೇಪವೂ ಇದ್ದು, ಇದನ್ನು ರಾಜ್ಯ ಸರ್ಕಾರವು ಗಮನಿಸದಿರುವುದು ತೀರಾ ಶೋಚನೀಯ ಸಂಗತಿ. ಒಂದು ವೇಳೆ ಪರಬಾರೆ ಆದರೆ ಆ ಭೂಮಿಯಲ್ಲಿ ದೊರೆಯುವ ಎಲ್ಲಾ ಲಾಭವೂ ಜಿಂದಾಲ್ ಕಂಪನಿಗೆ ಸೇರುತ್ತದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಯಾವ ಲಾಭವೂ ಸಿಗುವುದಿಲ್ಲ ಎಂದು ಆರೋಪಿಸಿದರು.
ಇದನ್ನು ನಾನು ಹೇಳದಿದ್ದರೇ ರಾಜ್ಯಕ್ಕೆ ವಂಚನೆ ಮಾಡಿದಂತಾಗುತ್ತದೆ. ಸರ್ಕಾರದ ತಪ್ಪನ್ನು ನಾನು ಹೇಳಿದರೆ ವಿಶ್ವನಾಥ್ ಮಂತ್ರಿಯಾಗಲು ಅವಕಾಶ ಸಿಗಲಿಲ್ಲವೆಂದು ಈ ರೀತಿ ಹೇಳುತ್ತಿದ್ದಾರೆಂದು ಬಿಂಬಿಸುತ್ತಾರೆ. ಸರ್ಕಾರದ ತೀರ್ಮಾನ ರಾಜ್ಯಕ್ಕೆ ಮಾರಕವಾದಾಗ ನಾನು ಹೇಳಲೇ ಬೇಕಾಗುತ್ತದೆ. ಜಿಂದಾಲ್ ಗೆ ಭೂಮಿ ನೀಡಲು ಸಚಿವ ಆನಂದ್ ಸಿಂಗ್ ಕೂಡ ವಿರೋಧ ವ್ಯಕ್ತಡಿಸಿದ್ದರು. ಜನರನ್ನು ರೊಚ್ಚಿಗೆಬ್ಬಿಸಿ ಹೋರಾಟ ಮಾಡಿದ್ದರು. ಆದರೆ ಈಗ ಏಕೆ ಮಲಗಿದ್ದೀರಿ. ಕಿಕ್ ಬ್ಯಾಕ್ ನಲ್ಲಿ ನಿಮಗೆಷ್ಟು ಸಿಕ್ಕಿದೆ ಎಂದು ಪ್ರಶ್ನಿಸಿದರು.
ಜಿಂದಾಲ್ ಕಂಪನಿಯಿಂದ ಸರ್ಕಾರಕ್ಕೆ 2 ಸಾವಿರ ಕೋಟಿ ಬಾಕಿ ಬರಬೇಕಿದೆ. ಹಾಗಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಗೆ ಭೂಮಿ ನೀಡುವ ವಿಚಾರವನ್ನು ಚರ್ಚಿಸಬೇಕು. ಜಿಂದಾಲ್ ಕಂಪನಿ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು.
ಕಳೆದ ಸಂಪುಟ ಸಭೆಯಲ್ಲಿ ಜಿಂದಾಲ್ ಪರ ತೆಗೆದುಕೊಂಡಿರುವ ತೀರ್ಮಾನವನ್ನು ಮುಂದಿನ ಸಭೆಯಲ್ಲಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿರುವುದರಿಂದ ಈ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ಬಗ್ಗೆ ವಿರೋಧ ಪಕ್ಷದ ಸಿದ್ದರಾಮಯ್ಯ ಏಕೆ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಏಕೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಈ ವಿಚಾರದ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.