ಜಿಂದಾಲ್‌ಗೆ ಭೂಮಿ ಮಾರಾಟ ಬಿಎಸ್‌ವೈಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು, ಏ. ೨೭- ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಜಿಂದಾಲ್ ಸಂಸ್ಥೆಗೆ ೩೬೬೭ ಎಕರೆ ಭೂಮಿ ಮಾರಾಟ ಮಾಡಲು ತೀರ್ಮಾನಿಸಿದ್ದಕ್ಕೆ ಭ್ರಷ್ಟಾಚಾರದ ಆರೋಪ ಮಾಡಿದ್ದ ಬಿಜೆಪಿ ಈಗ ಅದೇ ಜಿಂದಾಲ್‌ಗೆ ಸದ್ದಿಲ್ಲದೆ ಭೂಮಿಯನ್ನು ಮಾರಾಟ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೂರಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸಮ್ಮಿಶ್ರ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇಂದು ಇದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತಿಕೊಳ್ಳುವರೇ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿರೋಧ ಪಕ್ಷದಲ್ಲಿದ್ದಾಗ ವಿರೋಧ ಮಾಡುವುದು, ಆಡಳಿತಕ್ಕೆ ಬಂದಾಗ ಕದ್ದುಮುಚ್ಚಿ ಮಾಡುವುದು ಬಿಜೆಪಿಯ ಸಂಸ್ಕೃತಿ ಎಂದು ಹರಿಹಾಯ್ದಿರುವ ಕುಮಾರಸ್ವಾಮಿಯವರು ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ವಿಚಾರದಲ್ಲಿ ಅಂದು ಯಡಿಯೂರಪ್ಪನವರು ಅಹೋರಾತ್ರಿ ಧರಣಿ, ವಿಧಾನಸೌಧದ ಮುತ್ತಿಗೆ, ಸಮ್ಮಿಶ್ರ ಸರ್ಕಾರದ ಮೇಲೆ ಕಿಕ್‌ಬ್ಯಾಗ್ ಆರೋಪ ಮಾಡಿದ್ದರು. ಈಗ ಜಿಂದಾಲ್‌ಗೆ ಭೂಮಿಯ ಮಾಡುವುದು ಸರಿಯೇ ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಇದ್ದಾಗ ಶಾಸಕರಾಗಿದ್ದಾಗ ಆನಂದ್‌ಸಿಂಗ್ ಜಿಂದಾಲ್ ಕಂಪೆನಿಯನ್ನು ಈಸ್ಟ್ ಇಂಡಿಯಾ ಕಂಪೆನಿ ಎಂದಿದ್ದರು. ಜಿಂದಾಲ್ ವಿರುದ್ಧ ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅವರೇ ಇರುವ ಈಗಿನ ಸಚಿವ ಸಂಪುಟ ಸಭೆ ಜಿಂದಾಲ್‌ಗೆ ಭೂಮಿ ನೀಡಿದೆ. ಸಚಿವ ಆನಂದ್ ಸಿಂಗ್ ಈಗ ಈಸ್ಟ್ ಇಂಡಿಯಾ ಕಂಪೆನಿ ಪರವಾಗಿದ್ದಾರಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಅಂದು ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡೆ ಟೀಕೆ ಮಾಡಿ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದ್ದ ಹೆಚ್.ಕೆ. ಪಾಟೀಲ್ ಅವರು ಏನು ಮಾಡುತ್ತಿದ್ದಾರೆ. ಅದರ ದಾಖಲೆ ಪತ್ರಗಳು ಎಲ್ಲಿ ಅಡಗಿಕೊಂಡಿವೆ. ಈಗ ಅವುಗಳನ್ನು ಮತ್ತೆ ಬಿಡುಗಡೆ ಮಾಡಲು ಯಾರು ಅಡ್ಡ ಇದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜಿಂದಾಲ್ ಕಂಪೆನಿ ೩೬೬೭ ಎಕರೆ ಭೂಮಿ ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿರುವ ಮೊತ್ತ ಎಷ್ಟು ಎಂಬ ಪ್ರಶ್ನೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗೊತ್ತಿಲ್ಲ ಎಂದು ಉತ್ತರ ನೀಡಿದ್ದಾರೆ. ಗೃಹ ಸಚಿವರಿಗೆ ಮಾಹಿತಿ ಇಲ್ಲ ಎಂದರೆ ನಂಬಲು ಸಾಧ್ಯವೇ ಎಂದು ಅವರು ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.
ಜಿಂದಾಲ್‌ಗೆ ಲೀಸ್ ಕಂ ಸೇಲ್ ಆಧಾರದ ಭೂಮಿಯನ್ನು ಶುದ್ಧ ಕ್ರಯಕ್ಕೆ ಮಾಡಿಸಿಕೊಡಬೇಕಾದದ್ದು ಕಾನೂನು. ಅದನ್ನೆ ತಾವು ಮುಖ್ಯಮಂತ್ರಿಯಾಗಿದ್ದಾಗ ಮಾಡಲು ಹೊರಟ್ಟಿದ್ದು. ಆದರೆ ಬಿಜೆಪಿ ಕಿತಾಪತಿ ಮಾಡಿ ಜನರಲ್ಲಿ ಸಂಶಯ ಮೂಡಿಸಿದ್ದು. ಹಾಗಾಗಿ ತಮ್ಮ ಭೂಮಿ ಮಾರಾಟ ಮಾಡುವ ಪ್ರಕ್ರಿಯೆಯನ್ನು ಸಮ್ಮಿಶ್ರ ಸರ್ಕಾರ ಸ್ಥಗಿತಗೊಳಿಸಿತ್ತು ಎಂದು ಹೇಳಿರುವ ಕುಮಾರಸ್ವಾಮಿ ಬಿಜೆಪಿ ಈಗ ಜ್ಞಾನೋದಯವಾಗಿದೆ ಎಂದು ಗೇಲಿ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಜಿಂದಾಲ್ ಮುಂದೆ ಏಕಾಏಕಿ ಮಂಡಿಯೂರಲು ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪನವರೆ ಬಹಿರಂಗಪಡಿಸಲಿ ಎಂದು ಒತ್ತಾಯಿಸಿರುವ ಅವರು, ಅಂತಿಮವಾಗಿ ಭೂಮಿಯನ್ನು ಕ್ರಯ ಮಾಡುವ ಕಾನೂನು ಬಿಜೆಪಿಗೆ ಈಗಲಾದರೂ ಅರಿವಾಗಿದೆ. ಇನ್ನಾದರೂ ಬಿಜೆಪಿ ಸಲ್ಲದ ಕಿತಾಪತಿ ಮಾಡದಿರಲಿ ಎಂದು ಹೇಳಿದ್ದಾರೆ.