‘ಜಿಂಕೆ ವನ’ ನಿರ್ಮಿಸುವಂತೆ ಸಚಿವ ಶಿವಾನಂದ ಎಸ್. ಪಾಟೀಲಗೆ ಮನವಿ

ವಿಜಯಪುರ : ಜು.26:ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕೆ.ಬಿ.ಜೆ.ಎನ್.ಎಲ್. ನಿಗಮದ ವ್ಯಾಪ್ತಿ ಪ್ರದೇಶದಲ್ಲಿ ಒಂದು “ಜಿಂಕೆ ವನ” ನಿರ್ಮಿಸಬೇಕೆಂದು ಪರಿಸರ ಪ್ರೇಮಿಗಳು ಹಾಗೂ ಪ್ರಾಣಿ ಪ್ರೀಯರ ವತಿಯಿಂದ ಬೆಂಗಳೂರಿನಲ್ಲಿ ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಆಲಮಟ್ಟಿ ಆಣೆಕಟ್ಟು ಸುತ್ತ ಮುತ್ತ ಹಸಿರಿನಿಂದ ಕೂಡಿರುವ ವಿವಿಧ ಉದ್ಯಾನವನಗಳು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುತ್ತವೆ. ಕೃಷ್ಣೆಯ ದಡದಲ್ಲಿ ಹಸಿರಿನಿಂದ ಕೂಡಿರುವ ಅರಣ್ಯ ಪ್ರದೇಶದಲ್ಲಿ ಹಕ್ಕಿ ಪಕ್ಷಿಗಳ ಚಿಲಿ-ಪಿಲಿ ಶಬ್ದ, ನವಿಲಿನ ನರ್ತನ ವಿಶಾಲದಾದ ಆಕರ್ಷಣೀಯ ಬೀಡು ಆಲಮಟ್ಟಿ, ಈ ಪ್ರದೇಶದಲ್ಲಿ ಒಂದು ಜಿಂಕೆ ವನ ನಿರ್ಮಿಸುವುದರಿಂದ ರಾಜ್ಯ ಹಾಗೂ ದೇಶದ ವಿವಿಧ ಪ್ರದೇಶಗಳಿಂದ ಸಾವಿರಾರು ಪ್ರವಾಸಿಗರಿಗೆ ಮತ್ತು ಚಿಕ್ಕ ಮಕ್ಕಳಿಗೆ ಕನ್ಮನ ಸೆಳೆಯುವುದರಲ್ಲಿ ಉಪಯುಕ್ತವಾಗುತ್ತದೆ. ಮುಂದಿನ ದಿನಗಳಲ್ಲಿ ಜೀವ, ವೈವಿದ್ಯ ಪ್ರಾಣಿ-ಪಕ್ಷಿಗಳು ನಶಿಸಿ ಹೋಗಿ ನಮ್ಮ ಮುಂದಿನ ಪೀಳಿಗೆಗೆ ಕೇವಲ ಜಿಂಕೆಗಳು, ಪ್ರಾಣಿಗಳು ಹೀಗಿದ್ದವು ಎಂದು ಕೇವಲ ಛಾಯಾಚಿತ್ರಗಳಲ್ಲಿ ತೋರಿಸುವಂತಹ ಕಾಲ ಬರಬಹುದು. ಅರಣ್ಯ, ಪರಿಸರ ಹಾಗೂ ವನ್ಯಜೀವಿ ಪ್ರಾಣಿ ಪಕ್ಷಿಗಳ ಆರಾಧಕರು, ಪರಿಸರ ಪ್ರೇಮಿಗಳು ಎಚ್ಚರಗೊಂಡು ಅಳಿವು ಉಳಿವಿನ ಬಗ್ಗೆ ಜನ ಜಾಗೃತಿ ಮೂಡಸಬೇಕಾಗಿದೆ. ಆದ್ದರಿಂದ ಪರಿಸರ ವನ್ಯಜೀವಿ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರತಕ್ಕಂತವರು ಈ ಹಿಂದೆ 2006-2007ರಲ್ಲಿ ಇದೇ ವಿಷಯವಾಗಿ ವಿಧಾನಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಹಾಕಿ ಸದನದಲ್ಲಿ ಪ್ರಸ್ತಾಪಿಸಿರುವದನ್ನು ಪ್ರಾಣಿ ಪ್ರೀಯರು ಸಚಿವರಾದ ಶಿವಾನಂದ ಎಸ್. ಪಾಟೀಲ ರವರು ಗಮನಕ್ಕೆ ತಂದರು. ಆದರೆ ಇಲ್ಲಿಯವರೆಗೂ ಜಿಂಕೆ ವನ ನಿರ್ಮಾಣ ಅನುಷ್ಠಾನಕ್ಕೆ ಬಂದಿಲ್ಲಾ. ಕಾರಣ ಈಗಲಾದರೂ ತಾವು ಆಲಮಟ್ಟಿಯಲ್ಲಿ ಒಂದು ಜಿಂಕೆ ವನ ನಿರ್ಮಿಸಿಕೊಡಬೇಕೆಂದು ಪ್ರಾಣಿ ಪ್ರೀಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿಡಗುಂದಿ ಪಟ್ಟಣ ಪಂಚಾಯತಿ ಮಾಜಿ ಅದ್ಯಕ್ಷರಾದ ಸಂಗಮೇಶ ಬಳಗಾರ, ನಿವೃತ್ತ ಅರಣ್ಯ ಅಧಿಕಾರಿ ಹಾಗೂ ಅಧ್ಯಕ್ಷರು ವಿಜಯಪುರ ಜಿಲ್ಲಾ ನಿಸರ್ಗ ಸೌಹಾರ್ದ ಸಹಕಾರಿ ಸಂಘದ ಆರ್.ಎಸ್. ಪ್ಯಾಟಿಗೌಡರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀಕಾಂತ ಎಸ್. ಗಂಜಿಹಾಳ, ನಿಡಗುಂದಿ ತಾಲೂಕಾ ಪರಿಸರ ಹಾಗೂ ಪ್ರಾಣಿಪ್ರೀಯರಾದ ಚಂದ್ರಕಾಂತ ರೂಡಗಿ, ಗಂಗಾಧರ ವಾರದ, ಬಸಪ್ಪ ಕಾಜಗಾರ, ತಮ್ಮಣ್ಣ ಬಂಡಿವಡ್ಡರ, ಪರಶುರಾಮ ಕಾರಿ, ಬಸವನ ಬಾಗೇವಾಡಿಯ ಬಸವ ಸೈನ್ಯದ ಅದ್ಯಕ್ಷರಾದ ಶಂಕರಗೌಡ ಬಿರಾದಾರ, ತುಳಜಾರಾಮ ಹಜೇರಿ ಇನ್ನಿತರರು ಉಪಸ್ಥಿತರಿದ್ದರು.