ಜಿಂಕೆಗಳ ಹಾವಳಿ ತಪ್ಪಿಸುವಂತೆ ಮನ್ನಲಾಪೂರು ಗ್ರಾಮಸ್ಥರು ಮನವಿ

ರಾಯಚೂರು,ಜು.೨೦- ತಾಲೂಕಿನ ಮನ್ನಲಾಪೂರು ಗ್ರಾಮದಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ ಕೂಡಲೇ ಜಿಂಕೆಗಳ ಹಾವಳಿ ತಪ್ಪಿಸುವಂತೆ ಮನ್ನಲಾಪೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಸಿದರು.
ತಾಲೂಕಿನ ಕಲ್ಮಲಾ ಹೋಬಳಿಯ ಮನ್ನಲಾಪೂರು ಗ್ರಾಮದ ಜಮೀನುಗಳಲ್ಲಿ ಜಿಂಕೆ ಹಾವಳಿ ಹೆಚ್ಚಾಗಿದ್ದು, ಪ್ರತಿ ರೈತರ ಬೆಳೆಗಳಾದ ತೊಗರಿ ಮತ್ತು ಹತ್ತಿ ಹಾಗೂ ಇತರೇ ಬೆಳಗೆಗಳನ್ನು ಕಡಿದು ಹಾಕುತ್ತಿವೆ. ಇದರಿಂದ ರೈತರು ಸಾಲ ಸೂಲ ಮಾಡಿ ಹಣವನ್ನು ಬೆಳೆಗೆ ಖರ್ಚು ಮಾಡಿ ಎಕರೆಗೆ ಸುಮಾರು ೫೦ ರಿಂದ ೬೦ ಸಾವಿರ ಖರ್ಚು ಮಾಡಿದ್ದು, ಜಿಂಕೆಗಳ ಹಾವಳಿಯಿಂದ ರೈತರಿಗೆ ಬೆಳೆ ನಷ್ಟ ಹಾಗೂ ಆರ್ಥಿಕ ತೊಂದರೆಯಾಗುತ್ತಿದೆ.
ನೂರಾರು ಜಿಂಕೆಗಳು ಜಮೀನಿಗೆ ನುಗ್ಗಿ ಬೆಳೆನಷ್ಟ ಮಾಡುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ರೈತರು ಜಿಂಕೆಗಳನ್ನು ಓಡಿಸಲು ಹೋದಾಗ ಓಡಿ ಹೋಗುತ್ತವೆ. ನಂತರ ಮತ್ತೆ ಜಮೀನುಗಳಿಗೆ ಬರುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೂಡಲೇ ಜಿಲ್ಲಾಧಿಕಾರಿಗಳು ಮನವಿಯನ್ನು ಪರಿಗಣಿಸಿ ಜಿಂಕೆಗಳ ಹಾವಳಿ ತಪ್ಪಿಸಿ ಅಥವಾ ಅರಣ್ಯಕ್ಕೆ ಬಿಡುವಂತೆ ಮನ್ನಲಾಪೂರು ಗ್ರಾಮಸ್ಥರು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಮಲ್ಲಯ್ಯ, ನಾಗಪ್ಪ, ದೇವಣ್ಣ, ತಮ್ಮಣ್ಣ, ಭೀಮೇಶ, ರಮೇಶ ಅಳಗಡಿ ಸೇರಿದಂತೆ ಮನ್ನಲಾಪೂರು ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು.