ಜಾಹೀರಾತು ಫಲಕ ದುರಂತ: ಮೃತರ ಸಂಖ್ಯೆ ೧೫

ಮುಂಬೈ, ಮೇ೧೪- ಭಾರತದ ವಾಣಿಜ್ಯ ರಾಜಧಾನಿಯಲ್ಲಿ ನಿನ್ನೆ ಭಾರಿ ಗಾಳಿಗೆ ಜಾಹೀರಾತು ಫಲಕ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ ೧೫ಕ್ಕೆ ಏರಿಕೆಯಾಗಿದೆ.
ಪೂರ್ವ ಮುಂಬೈನ ಪೆಟ್ರೋಲ್ ಬಂಕ್ ಬಳಿ ಅಳವಡಿಸಿದ್ದ ಫಲಕ ಕುಸಿದು ಬಿದ್ದಾಗ ೧೫ ಮಂದಿ ಅದರ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟರು.
ಅವಶೇಷಗಳಡಿ ಸಿಕ್ಕಿಹಾಕಿಕೊಂಡವರಿಗಾಗಿ ರಕ್ಷಣಾ ತಜ್ಞರು ಶೋಧಕಾರ್ಯ ಮುಂದುವರಿಸಿದ್ದಾರೆ. ಎಂಟು ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಇನ್ಸ್ಪೆಕ್ಟರ್ ಗೌರವ್ ಚೌಹಾಣ್ ಹೇಳಿದ್ದಾರೆ.
ನಾಲ್ಕು ದೇಹಗಳು ಇನ್ನೂ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿವೆ ಎಂದು ವಿವರಿಸಿದ್ದು, ಆದರೆ ಪೆಟ್ರೋಲ್ ಪಂಪ್ ಹಾಗೂ ಅಪಾಯಕಾರಿ ಸನ್ನಿವೇಶ ಇರುವುದರಿಂದ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಇಗೋ ಮೀಡಿಯಾ ಮಾಲೀಕ ಭವೇಶ್ ಭಿಂಡೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಜಾಹೀರಾತು ಫಲಕವನ್ನು ಅನುಮತಿ ಇಲ್ಲದೇ ಅಕ್ರಮವಾಗಿ ಅಳವಡಿಸಲಾಗಿತ್ತು ಎಂದು ಹೇಳಲಾಗಿದೆ.
ಇನ್ನೂ, ಮುಂಬೈ ಹಾಗೂ ಮೆಟ್ರೋಪಾಲಿಟನ್ ನಗರದ ವಿವಿಧ ಕಡೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮಳೆಸಂಬಂಧಿ ಘಟನೆಗಳಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ದಾದರ್, ಕುರ್ಲಾ, ಮಹೀಂ, ಘಟ್ಕೋಪರ್, ಮುಳುಂದ್ ಮತ್ತು ವಿಖ್ರೋಲಿಯಲ್ಲಿ ಮಳೆ ಹಾಗೂ ಬಿರುಗಾಳಿಯಿಂದ ಜನ ಕಂಗಾಲಾಗಿದ್ದಾರೆ. ದಕ್ಷಿಣ ಮುಂಬೈನಲ್ಲಿ ತುಂತುರು ಮಳೆ ಬಿದ್ದಿದೆ. ಉಪನಗರಗಳಾದ ಥಾಣೆ, ಅಂಬೆರ್ನಾಥ್, ಬಲ್ಡಾಪುರ, ಕಲ್ಯಾಣ್ ಮತ್ತು ಉಲ್ಲಾಸನಗರಗಳಲ್ಲೂ ಸಾಮಾನ್ಯ ಮಳೆಯಾಗಿದೆ.