
ಬೆಂಗಳೂರು, ಮಾ.೧೫- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ಲೆಕ್ಸ್, ಬ್ಯಾನರ್ ಗಳ ಪ್ರಕಟಿಸುವ ಏಜೆನ್ಸಿಗಳ ವಿರುದ್ಧ ಬಿಬಿಎಂಪಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಆದೇಶ ಬೆನ್ನಲ್ಲೇ ನಗರ ವ್ಯಾಪ್ತಿಯ ಜಾಹೀರಾತು ಪ್ರಕಟಿಸುವ ಏಜೆನ್ಸಿಗಳ ಮಾಹಿತಿ ಕಲೆಹಾಕಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಇಲ್ಲಿನ ಮಲ್ಲೇಶ್ವರಂ, ರಾಜಾಜಿನಗರ, ಬಿಟಿಎಂಲೇಔಟ್, ವಿಜಯನಗರ, ಕೆಆರ್ ಪುರಂ ಸೇರಿದಂತೆ ಎಂಟು ಬಿಬಿಎಂಪಿ ಎಂಟು ವಲಯಗಳಲ್ಲಿ ಇರುವ ಏಜೆನ್ಸಿಗಳು, ಮುದ್ರಣ ಯಂತ್ರಗಳನ್ನು ಪಟ್ಟಿ ಮಾಡಿ, ಅವರಿಗೆ ನೋಟಿಸ್ ನೋಡಿ ಎಚ್ಚರವಹಿಸಲು ಬಿಬಿಎಂಪಿ ಅಧಿಕಾರಿಗಳು ತಯಾರಿ ನಡೆಸಲಾಗಿದೆ.
ಇನ್ನೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾಹೀರಾತುಗಳನ್ನು ಪ್ರಕಟಿಸುವ ಏಜೆನ್ಸಿಗಳ ಹಾಗೂ ಪ್ಲೆಕ್ಸ್, ಬ್ಯಾನರ್ ಗಳಲ್ಲಿ ಭಾವಚಿತ್ರವಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ೬ ತಿಂಗಳವರೆಗಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ವಾಣಿಜ್ಯ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುವ ಕಂಪನಿ, ಉತ್ಪಾದಕರು ತಮ್ಮ ಉತ್ಪನ್ನಗಳ ಬಗ್ಗೆ ವಾಣಿಜ್ಯ ಜಾಹೀರಾತುಗಳ ಮೂಲಕ ಸಾರ್ವಜನಿಕ ಪ್ರದರ್ಶನ ಮಾಡುವಲ್ಲಿ ಖಾಸಗಿ ಏಜೆನ್ಸಿಗಳು ಅಧಿಕೃತವಾಗಿ ಬಿಬಿಎಂಪಿಯಿಂದ ಪರವಾನಿಗೆ ಪಡೆದು, ವಾಣಿಜ್ಯ ಜಾಹೀರಾತು ಪ್ರದರ್ಶನ ಮಾಡಬೇಕು.
ಅದರ ಹೊರತಾಗಿ ಜಾಹೀರಾತು ಪ್ರಕಟಸುವಂತಹ ಕಂಪನಿ, ಉತ್ಪಾದಕರು, ಪ್ರಕಟಣಾಗಾರರು, ಮುದ್ರಣಗಾರರು ಮತ್ತು ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.