ಜಾವೇದ್ ಅಖ್ತರ್ ಸಹಿ ನಕಲು ಮಾಡಿ ವಂಚನೆ ಖದೀಮನ ಸೆರೆ

ಬೆಂಗಳೂರು,ಅ.13-ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಜಾವೇದ್ ಅಖ್ತರ್ ಸಹಿ ನಕಲು ಮಾಡಿ ವಂಚನೆ ನಡೆಸಿದ್ದ ಖದೀಮನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಬೌರಿಂಗ್ ಅಸ್ಪತ್ರೆಯಲ್ಲಿ ಗುತ್ತಿಗೆ ನೌಕರನಾಗಿದ್ದ ಸಂದೀಪ್ ಬಂಧಿತ ಆರೋಪಿಯಾಗಿದ್ದಾನೆ.ಆರೋಪಿ ಸಂದೀಪ್ ಆರೋಗ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಜಾವೇದ್ ಅಖ್ತರ್ ಅವರ ಸಹಿ ನಕಲು ಮಾಡಿ ಜನರ ಬಳಿ ಹಣ ಪಡೆದು ವಂಚನೆ ಮಾಡಿದ್ದಾನೆ.
ಸುಮಾರು 20ಕ್ಕೂ ಹೆಚ್ಚು ಜನ ಇವನ ಮಾತಿಗೆ ಮರಳಾಗಿ ಹಣ ಕಳೆದುಕೊಂಡಿದ್ದಾರೆ.ಬೌರಿಂಗ್ ಅಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರನಾಗಿದ್ದ ಸಂದೀಪ್ ಅಲ್ಲಿ ಕೆಲಸ ಬಿಟ್ಟಿದ್ದ. ಬಳಿಕ ತಾನು ವಿಧಾನಸೌಧದಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ಹೇಳಿ ಹಲವು ಜನರಿಗೆ ನಂಬಿಸಿದ್ದ.
ಬೌರಿಂಗ್ ಅಸ್ಪತ್ರೆಯ ಹೊರಗುತ್ತಿಗೆ ನೌಕರರಿಗೆ ಅಂದರೆ ತನ್ನ ಜೊತೆ ಕೆಲಸ ಮಾಡಿದ್ದವರಿಗೆ ಸಿಸ್ಟಮ್ ಅನಾಲಿಸ್ಟ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದ.
ಖಾಯಂ ಕೆಲಸ ಕೊಡಿಸುವುದಾಗಿ ಹೇಳಿ ತಬ್ರೇಜ್ ಷರೀಫ್ ಎಂಬುವವರ ಬಳಿ 6 ಲಕ್ಷ ಹಣ ಪಡೆದು ವಂಚಿಸಿದ್ದನು.
ಇನ್ನು ವಿಧಾನಸೌಧ ಸೇರಿ ಹಲವೆಡೆ ಖಾಯಂ ಕೆಲಸ ಕೊಡಿಸುವುದಾಗಿ ನಂಬಿಸಿ 20ಕ್ಕೂ ಹೆಚ್ಚು ಜನರ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ. ಜಾವೇದ್ ಹೆಸರಲ್ಲಿ ನಕಲಿ ಆದೇಶ ಪತ್ರ ನೀಡಿ ವಂಚಿಸಿದ್ದ. ಸದ್ಯ ಈ ಬಗ್ಗೆ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಚಿರಂಜೀವಿ, ಸಂದೀಪ್ ಎಂಬ ವ್ಯಕ್ತಿ ಜಾವೇದ್ ಅಕ್ತರ್ ಹೆಸರಲ್ಲಿ ನಕಲಿ ಸಹಿ ಮಾಡಿ, ನಕಲಿ ಆದೇಶ ಪತ್ರ ನೀಡಿದ್ದಾರೆ. ಎಂದು ದೂರು ನೀಡಿದ್ದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ದೂರು ಆಧರಿಸಿ ಆರೋಪಿ ಸಂದೀಪ್ ನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.