ಜಾಲ್ಸೂರಿನ ಬೈತಡ್ಕದಲ್ಲಿ ಮೂರು ಕಡೆ ಸಿ.ಸಿ. ಕ್ಯಾಮರಾ ಅಳವಡಿಕೆ-ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾದ ಜಾಲ್ಸೂರು ಗ್ರಾ.ಪಂ.

ಸುಳ್ಯ , ಮೇ.೧- ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ ಮಾಡುವುದರ ಮೂಲಕ ಹೆದ್ದಾರಿ ಬದಿ ತ್ಯಾಜ್ಯ ಎಸೆಯುವವರ ಮುಂದೆ ಕಠಿಣ ಕ್ರಮ ಕೈಗೊಳ್ಳಲು ಗ್ರಾ.ಪಂ. ಆಡಳಿತ ಮಂಡಳಿ ನಿರ್ಧರಿಸಿದೆ.
ಗ್ರಾಮ ಪಂಚಾಯತಿಯ ಹದಿನಾಲ್ಕನೆಯ ಹಣಕಾಸು ಯೋಜನೆಯ ವತಿಯಿಂದ ಐವತ್ತು ಸಾವಿರ ರೂ. ಅನುದಾನದಲ್ಲಿ ಮೂರು ಸಿ.ಸಿ. ಕ್ಯಾಮರಾ ಹಾಗೂ ಕಂಪ್ಯೂಟರ್ ಮಾನಿಟರ್ ಖರೀದಿಸಲಾಗಿದ್ದು, ಇದನ್ನು ಬೈತಡ್ಕದ ಪುರುಷೋತ್ತಮ ಎಂಬವರ ಮನೆಯಲ್ಲಿ ಇರಿಸಲಾಗಿದೆ. ಇದರ ನಿರ್ವಹಣೆಯನ್ನು ಗ್ರಾ.ಪಂ. ಮಾಡಲಿದ್ದು, ಪುರುಷೋತ್ತಮ ಅವರು ಉಚಿತ ವಿದ್ಯುತ್ ನೀಡಿ ಸಹಕರಿಸಿದ್ದಾರೆ.
ಇನ್ನು ಮುಂದೆ ಬೈತಡ್ಕ ಪರಿಸರದಲ್ಲಿ ರಸ್ತೆ ಬದಿ ವಾಹನಗಳಲ್ಲಿ ತ್ಯಾಜ್ಯ ಎಸೆಯುವುದು ಕಂಡುಬಂದರೆ ಪೊಲೀಸ್ ದೂರು ನೀಡಿ ಅಂತಹ ವಾಹನದ ಪರವಾನಿಗೆ ರದ್ದು ಹಾಗೂ ತ್ಯಾಜ್ಯ ಎಸೆದವರಿಗೆ ಐದು ಸಾವಿರ ರೂ. ದಂಡ, ಹಾಗೂ ಬೈತಡ್ಕ ಪರಿಸರದಲ್ಲಿ ತ್ಯಾಜ್ಯ ಎಸೆಯುವವರ ಪೋಟೋ ತೆಗೆದು ಗ್ರಾಮ ಪಂಚಾಯತಿಗೆ ತಿಳಿಸಿದರೆ ಅಂತಹವರಿಗೆ ರೂ. ಒಂದು ಸಾವಿರ ಬಹುಮಾನ ನೀಡಲಾಗುವುದು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ.ಬಾಬು ಕದಿಕಡ್ಕ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಸೇರಿದಂತೆ ಪಂಚಾಯತಿ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.