ಜಾಲಿ ರೈಡ್‌ಗೆ ಡೆಲಿವರಿಬಾಯ್ ಬಲಿ

ಬೆಂಗಳೂರು,ಜೂ.೧೯-ನಗರದಲ್ಲಿ ಭಯಾನಕ ಅಪಘಾತ ಪ್ರಕರಣ ನಡೆದಿದ್ದು,ಕುಡಿದ ಮತ್ತಿನಲ್ಲಿ ಜಾಲಿ ರೈಡ್ ಹೊರಟ ಯುವಕ-ಯುವತಿಯರು ಡೆಲಿವರಿ ಬಾಯ್ ನನ್ನು ಬಲಿ ತೆಗೆದುಕೊಂಡ ದಾರುಣ ಘಟನೆ ರಾಜರಾಜೇಶ್ವರಿನಗರದ ಮೆಟ್ರೊ ನಿಲ್ದಾಣ ಸಮೀಪದ ವಿಶ್ವಪ್ರಿಯ ಅಪಾರ್ಟ್‌ಮೆಂಟ್ ಬಳಿ ನಡೆದಿದೆ.
ವಿಶ್ವಪ್ರಿಯ ಅಪಾರ್ಟ್‌ಮೆಂಟ್ ಬಳಿ ನಿನ್ನೆ ಮಧ್ಯರಾತ್ರಿ ೧.೪೫ರ ವೇಳೆ ಕಾರಿನಲ್ಲಿ ಹೋಗುತ್ತಿದ್ದ ಯುವಕ-ಯುವತಿಯರ ಅತಿ ವೇಗದ ಮೋಜಿನ ಉಚ್ಚಾಟಕ್ಕೆ ಕುಟುಂಬದ ಆಧಾರವಾಗಿದ್ದ ಯುವಕ ಬಲಿಯಾಗಿದ್ದು,
ಆತನನ್ನು ಜೊಮ್ಯಾಟೋ ಡೆಲಿವರಿ ಬಾಯ್ ಎಚ್.ಡಿ.ಕೋಟೆ ಮೂಲದ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.
ಅಪಘಾತಕ್ಕೀಡಾದ ಪವನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಆತನನ್ನು ಆಸ್ಪತ್ರೆಗೆ ದಾಖಲಿಸದೇ ಅಲ್ಲಿಯೇ ಬಿಟ್ಟು ಪರಾರಿಯಾಗುವ ಮೂಲಕ ಮೃಗಗಳಿಗಿಂತಲೂ ಕಡೆಯಾಗಿ ವರ್ತಿಸಿ ಮಾನವೀಯತೆ ಮರೆತು ಪರಾರಿಯಾಗುತ್ತಿದ್ದ ಲಜ್ಜಗೆಟ್ಟವರನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪವನ್ ಹೋಗುತ್ತಿದ್ದ ಬೈಕ್‌ಗೆ ಕಾರು ಗುದ್ದಿ ಸುಮಾರು ೧೦೦ ಮೀಟರ್ ಎಳೆದೊಯ್ದಿದೆ. ರಕ್ತದ ಮಡುವಿನಲ್ಲೇ ಒದ್ದಾಡಿ ಪವನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಪಘಾತದ ಬೆನ್ನಲ್ಲೇ ಕಾರು ಚಾಲಕ ಬಿಟ್ಟು ಕಾರಲ್ಲಿದ್ದ ನಾಲ್ವರು ಅಲ್ಲಿಂದ ಪರಾರಿಯಾಗಿದ್ದು, ಕಾರು ಚಾಲಕ ವಿನಾಯಕ್‌ನನ್ನು ಬ್ಯಾಟರಾಯನಪುರ ಸಂಚಾರ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ.
ಗೆಳೆಯರ ಪಾರ್ಟಿ:
ಬಂಧಿತ ಕಾರು ಚಾಲಕ ವಿಜಯನಗರದ ವಿನಾಯಕ್, ರಾಜಾಜಿನಗರ ಮಹೀಂದ್ರ ಶೋ ರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು ನಿನ್ನೆ ಆತನಿಗೆ ಇನ್ಸೆಂಟಿವ್ ಬಂದಿತ್ತು.
ಆ ಹಣದಲ್ಲಿ ಗೆಳೆಯರೆಲ್ಲ ಸೇರಿ ಪಾರ್ಟಿ ಮಾಡಿದ್ದು ಅದರಲ್ಲಿ ಯುವತಿಯರು ಕೂಡ ಸೇರಿದ್ದರು. ಮದ್ಯಪಾನ ಮಾಡಿಕೊಂಡು ಕಾರು ಚಾಲನೆ ಮಾಡಿಕೊಂಡು ಬಂದ ವಿನಾಯಕ್, ನಾಯಂಡಹಳ್ಳಿ ಕಡೆಯಿಂದ ರಾಜರಾಜೇಶ್ವರಿ ನಗರಕ್ಕೆ ತೆರಳುತ್ತಿದ್ದ.ಗೆಳೆಯ ಸಾಗರ್‌ನನ್ನು ಡ್ರಾಪ್ ಮಾಡಲು ವಿನಾಯಕ್ ಮತ್ತು ಸ್ನೇಹಿತರು ತೆರಳುತ್ತಿದ್ದಾಗ ಮುಂದೆ ಬೈಕ್‌ನಲ್ಲಿ ಹೋಗುತ್ತಿದ್ದ ಪವನ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬ್ಯಾನೆಟ್‌ಗೆ ಸಿಲುಕಿದ ಆತನನ್ನು ಸುಮಾರ ೧೦೦ ಮೀಟರ್ ಎಳೆದೊಯ್ದಿದ್ದಾರೆ.
ಕಾರು ಪುಡಿಪುಡಿ:
ಅಪಘಾತ ಬಳಿಕ ಪರಾರಿಯಾಗಲು ಕಾರು ಚಲಾಯಿಸಿಕೊಂಡು ತೆರಳುತ್ತಿದ್ದಾಗ ರಾಜರಾಜೇಶ್ವರಿ ನಗರ ಮೆಟ್ರೊ ನಿಲ್ದಾಣ ಬಳಿ ಸ್ಥಳೀಯರು ಒಂದು ಕಿ.ಮೀ ವರೆಗೆ ಬೆನ್ನಟ್ಟಿ ಹಿಡಿದಿದು ಕಾರಲ್ಲಿದ್ದವರನ್ನು ಥಳಿಸಿ, ಕಾರನ್ನು ಪುಡಿ ಪುಡಿ ಮಾಡಿ ಕಾರು ಚಾಲಕನನ್ನು ಬ್ಯಾಟರಾಯನಪುರ ಸಂಚಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಷ್ಟೊತ್ತಿಗಾಗಲೇ ಕಾರಲ್ಲಿದ್ದ ಮೂವರು ಯುವತಿಯರು ಹಾಗೂ ಓರ್ವ ಯುವಕ ಕಾರಿಂದ ಇಳಿದು ಪರಾರಿಯಾಗಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.