ಜಾಲಹಳ್ಳಿ: ಬಿಡಾಡಿದನ ಹಾವಳಿಯಿಂದ ಸಂಚಾರಕ್ಕೆ ತೊಂದರೆ

ದೇವದುರ್ಗ,ಸೆ.೧೫- ತಾಲ್ಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಿತ್ಯ ಸಾವಿರಾರು ಜನ ಪ್ರಯಾಣಿಕರು ಹಾಗೂ ವಾಹನ ಸಂಚಾರವಿದೆ. ಆದರೆ, ಸುಗಮ ಸಂಚಾರದ ಸಮಸ್ಯೆ ಹೆಚ್ಚಾಗುತ್ತಿದ್ದು, ಸ್ಥಳೀಯ ಗ್ರಾ.ಪಂ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಿಂದೆ ಬಿದ್ದಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ಬಿಡಾಡಿ ದನಗಳು ನಿತ್ಯ ಬೆಳಿಗ್ಗೆ ,ರಾತ್ರಿ, ಸಂಜೆ, ರಸ್ತೆಯ ಮಧ್ಯೆದಲ್ಲಿಯೇ ನಿಲ್ಲುತ್ತಿರುವುದರಿಂದಾಗಿ ವಾಹನ ಸವಾರರು ಪರದಾಡುತ್ತಾ ಮುಂದೆ ಕ್ರಮಿಸುವ ಅನಿವಾರ್ಯತೆ ಇದೆ.
ತಿಂಥಣಿ ಬ್ರಿಜ್ – ಕಲ್ಮಲಾ ರಾಜ್ಯ ಹೆದ್ದಾರಿಯು ಪಟ್ಟಣದ ಮುಖಾಂತರ ಹಾದು ಹೋಗಿದ್ದು, ಸಾವಿರಾರೂ ವಾಹನಗಳು ಜಾಲಹಳ್ಳಿ ಪಟ್ಟಣದ ಮಾರ್ಗವಾಗಿ ಓಡಾಡುತ್ತವೆ.
ಈ ಸಂದರ್ಭದಲ್ಲಿ ಬಿಡಾಡಿ ದನ, ಹಂದಿ, ನಾಯಿಗಳು ರಸ್ತೆಯಲ್ಲಿಯೇ ಇರುತ್ತಿರುವುದರಿಂದಾಗಿ ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಎಸ್ ಬಿ ಐ ಬ್ಯಾಂಕ್, ಅಂಬೇಡ್ಕರ್ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ಸಾಕಷ್ಟು ಸಮಸ್ಯೆಯಾಗುತ್ತಿದೆ.
ರಸ್ತೆಗೆ ಅಡ್ಡಲಾಗಿ ದನಗಳು ಮಲಗುವುದರಿಂದ ನಿತ್ಯ ಅಪಾಘತ ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.
ಈಚೆಗೆ ಹೇರುಂಡಿ ಗ್ರಾಮದ ನಿವಾಸಿಯೊಬ್ಬರಿಗೆ ಎಮ್ಮೆ ರಸ್ತೆಯಲ್ಲಿ ಅಡ್ಡ ಬಂದು ಬೈಕ್ ನಿಂದ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದು ರಾಯಚೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಸ್ತೆ ಆಕ್ರಮಿಸಿದ ಗೂಡಂಗಡಿಗಳು: ಪಟ್ಟಣದ ಮುಖ್ಯ ರಸ್ತೆಯು ಎಸ್.ಆರ್ ಪೆಟ್ರೋಲ್ ಬಂಕ್ ನಿಂದ ಲಿಂಗದಹಳ್ಳಿ ಕ್ರಾಸ್ ವರೆಗೆ ರಾಜ್ಯ ಹೆದ್ದಾರಿ ೧೦೦ ಅಡಿ ಅಗಲವಾಗಿ ನಿರ್ಮಿಸಿಲಾಗಿದೆ.
ಅದರೆ, ರಸ್ತೆ ವಿಭಜಕ ನಿರ್ಮಿಸದೇ ಬಿಟ್ಟಿದ್ದಾರೆ, ರಸ್ತೆಯ ಪಕ್ಕದಲ್ಲಿ ದೊಡ್ಡ ವಿದ್ಯುತ್ ಕಂಬಗಳನ್ನು ಅಳವಡಿಸಿಲ್ಲ. ದ್ವಿಪಥ ರಸ್ತೆ ಇದ್ದರೂ ವಾಹನಗಳು ಸಂಚರಿಸದಂತಹ ಪರಿಸ್ಥಿತಿ ಇದೆ.
ಗೂಡಂಗಡಿಗಳು ರಸ್ತೆಯ ಮೇಲೆ ಇಟ್ಟು ಕೊಂಡಿದ್ದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇನ್ನು ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿಯೇ ನಿಲ್ಲಿಸಿ ದಿನಸಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ಖರೀದಿಸುತ್ತಿದ್ದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಟ್ಟಣದಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಸಹ ಸಂಚಾರ ನೇಮಗಳನ್ನು ಪಾಲಿಸದೇ ವಾಹನ ಸಂಚಾರ,ರಸ್ತೆ ನೇಮಗಳು ಪಾಲಿಸದೇ ಇದ್ದರೆ ಹೇಗೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಕುರಿತು ತಾಲ್ಲೂಕು ಪಂಚಾಯಿತಿ ಹಾಗೂ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಜಾಲಹಳ್ಳಿ ಪಟ್ಟಣದಲ್ಲಿ ಸಭೆ ನಡೆಸಿ, ಇಲ್ಲವೇ ತಿಳಿವಳಿಕೆ ನೀಡುವ ಮೂಲಕ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲಿ ಜನತೆ ಒತ್ತಾಯಿಸಿದ್ದಾರೆ.