ಜಾಲಹಳ್ಳಿ ಪಟ್ಟಣ ಪಂಚಾಯಿತಿಗೆ ಮುದಗೋಟ ಗ್ರಾಮ ಸೇರ್ಪಡೆಗೆ ವಿರೋಧ

ದೇವದುರ್ಗ.ಏ.೧೮-ಜಾಲಹಳ್ಳಿ ಪಟ್ಟಣ ಪಂಚಾಯಿತಿಗೆ ಮುದಗೋಟ ಹಾಗೂ ಲಿಂಗದಹಳ್ಳಿ ಗ್ರಾಮಗಳ ಸೇರ್ಪಡೆಗೆ ವಿರೋಧಿಸಿ ಇಲ್ಲಿನ ಪರಮಾನಂದ ದೇವಸ್ಥಾನದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ನೇತೃತ್ವದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಶಾಸಕರ ಮುಂದೆ ಮಹಿಳೆಯರು ಅಳಲು ತೋಡಿಕೊಂಡರು.
ಜಾಲಹಳ್ಳಿ ಗ್ರಾಪಂಯನ್ನು ಪಪಂಯಾಗಿ ಮೇಲ್ದರ್ಜೆಗೇರಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಪಪಂ ವ್ಯಾಪ್ತಿಗೆ ಚಿಂಚೋಡಿ ಗ್ರಾಪಂಗೆ ಒಳಪಡುವ ಲಿಂಗದಹಳ್ಳಿ ಹಾಗೂ ಕರಡಿಗುಡ್ಡ ಗ್ರಾಪಂಗೆ ಒಳಪಡುವ ಮುದಗೋಟ್ ಸೇರ್ಪಡೆ ಮಾಡಲಾಗಿದೆ. ಇದಕ್ಕೆ ಗ್ರಾಮಸ್ಥರು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು.
ಎರಡೂ ಗ್ರಾಮಗಳ ಜನರು ಕೃಷಿ ಅವಲಂಬಿಸಿದ್ದು, ಗ್ರಾಪಂಯಲ್ಲಿ ಉದ್ಯೋಗ ಖಾತ್ರಿ ಯೋಜನೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಪಪಂ ಸೇರ್ಪಡೆಯಿಂದ ಬಹುತೇಕ ಜನರು ಉದ್ಯೋಗವಿಲ್ಲದೆ ಮಹಾನಗರಗಳಿಗೆ ಗುಳೆ ಹೋಗುವ ಸ್ಥಿತಿ ಎದುರಾಗಲಿದೆ. ಅಲ್ಲದೆ ವಸತಿ ಯೋಜನೆ ಸೇರಿ ಸರ್ಕಾರದ ವಿವಿಧ ಯೋಜನೆಗಳು ಕೈತಪ್ಪಲಿವೆ ಎಂದು ದೂರಿದರು.
ಜಾಲಹಳ್ಳಿಗೆ ೩ಕಿಮೀ ಅಂತರವಿರುವ ಗ್ರಾಮಗಳನ್ನು ಬಿಟ್ಟು ೮ಕಿಮೀ ದೂರದ ಲಿಂಗದಹಳ್ಳಿ, ಮುದಗೋಟ್ ಗ್ರಾಮ ಸೇರ್ಪಡೆ ಮಾಡಲಾಗಿದೆ. ಇದರ ಹಿಂದೆ ಅವೈಜ್ಞಾನಿಕ ಉದ್ದೇಶವಿದ್ದು, ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದು ನೋವು ತೋಡಿಕೊಂಡರು. ಇದಕ್ಕೆ ಶಾಸಕ ಕೆ.ಶಿವಗನೌಡ ನಾಯಕ ಪ್ರತಿಕ್ರಿಯಿಸಿ, ಸರ್ಕಾರ ಆದೇಶ ನೀಡಿರುವ ಹಿನ್ನೆಲೆ ಈಗ ಏನು ಮಾಡಲು ಬರುವುದಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮಹಿಳೆಯರು ಮಾಸಾಶನ ಸೇರಿ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು. ಜಾಲಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ೧೦೮ವಾಹನ, ಅಗತ್ಯ ವೈದ್ಯಾಧಿಕಾರಿ ಕೊರತೆ ಸೇರಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು. ದೂರದ ಲಿಂಗದಹಳ್ಳಿದಲ್ಲಿ ಕುಂದುಕೊರತೆ ಸಭೆ ಆಯೋಜಿಸಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ವೀರಣ್ಣ ಪಾಣಿ, ಮುದಗೋಟ್ ಗ್ರಾಮದ ಮಹಿಳೆಯರಾದ ಅಂಜಳಮ್ಮ ಮೇಟಿ, ಮಹಾದೇವಮ್ಮ ಪೊಪಾ, ಲಕ್ಷ್ಮಿಮಾಳಿ, ಗಂಗಮ್ಮ, ಹನುಮಂತಿ, ಯಲ್ಲಮ್ಮ ಮಾಪಾ, ಎಂ.ಎಸ್.ಪಾಟೀಲ್ ಇತರರಿದ್ದರು.