ಜಾಲಹಳ್ಳಿ: ನರೇಗಾ ಸಾಮಾಜಿಕ ಲೆಕ್ಕಪರಿಶೋಧನೆ ಪೂರ್ವಭಾವಿ ಸಭೆ

ಜಾಲಹಳ್ಳಿ,ಜು.೨೬- ಪಟ್ಟಣದ ಗ್ರಾ.ಪಂ ಕಚೇರಿಯಲ್ಲಿ ಮಂಗಳವಾರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪತ್ಯಾಪ್ಪ ರಾಠೋಡ್ ನೇತೃತ್ವದಲ್ಲಿ ಸಭೆ ಜರುಗಿತು.
ನರೇಗಾ ಕಾಮಗಾರಿ ಪರಿಶೀಲನೆ ತಂಡ ಸಂಖ್ಯೆ ೫ರ ಮುಖ್ಯಸ್ಥರಾದ ಸಾಮಾಜಿಕ ಲೆಕ್ಕಪರಿಶೋಧನಾ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಲಕ್ಷ್ಮಣ ಮಂಗಸೂಳೆ ಚಿಕ್ಕೊಡಿ, ನಾಗೇಶ ಮಡಿವಾಳ ಖಾನಾಪುರ, ಸಂಜೀವು ಕೋಲ್ಕಾರ್ ಸವದತ್ತಿ ಭಾಗವಹಿಸಿ ಮಾತನಾಡಿದರು.
ಈಗಾಗಲೇ ನರೇಗಾ ಕಾಮಗಾರಿಗಳ ಸಮಗ್ರ ತನಿಖೆ ಕೈಗೊಳ್ಳಲು ತಾಲ್ಲೂಕಿನ ಎಲ್ಲಾ ಗ್ರಾ.ಪಂ ಗಳಲ್ಲಿ ಕಾರ್ಯ ನಡೆಯುತ್ತಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಗೊಂಡ ಒಟ್ಟು ಕಾಮಗಾರಿಗಳ ಸಂಖ್ಯೆ ೭೪೩ ಇದೆ. ಅದರಲ್ಲಿ ಅತಿ ಹೆಚ್ಚು ೨೪೦ ಕಾಮಗಾರಿಗಳು ಕೃಷಿ ಜಮೀನುಗಳಲ್ಲಿ ಬದು ನಿರ್ಮಾಣ ಇವೆ. ಅಲ್ಲದೇ ರೈತರ ಜಾನುವಾರುಗಳ ಶೇಡ್ ನಿರ್ಮಾಣ, ಕೃಷಿಹೊಂಡ, ನಮ್ಮ ಹೊಲ ನಮ್ಮ ರಸ್ತೆ, ಅಂಗನವಾಡಿ ಕಟ್ಟಡ, ರಕ್ಷಣಾ ಗೋಡೆ ಯಂತಹ ಕಾಮಗಾರಿ ಮಾಡಲಾಗಿದೆ ಎನ್ನುವ ಕಾಮಗಾರಿಗಳ ಹೆಸರು ಇರುವ ಪೈಲ್ ಇವೆ.
ಪ್ರತಿಯೊಂದು ಕಾಮಗಾರಿಗಳನ್ನು ಸ್ಥಳ ಪರಿಶೀಲನೆ ಮಾಡಲಾಗುವುದು, ಅ ಸದರ್ಭದಲ್ಲಿ ಕಾಮಗಾರಿ ನಿರ್ವಹಣೆ ಮಾಡಿರುವ ಕಾಯಕಬಂಧು, ಬಿ.ಎಪ್.ಟಿ ಹಾಗೂ ತಾಂತ್ರಿಕ ಸಹಾಯಕರು ತನಿಖೆಗೆ ಸಹಕಾರ ನೀಡಬೇಕೆಂದು ಸಭೆಯಲ್ಲಿ ತಿಳಿಸಿದರು.
ತನಿಖೆಯ ಉದ್ದೇಶ ಈ ನರೇಗಾ ಕಾಮಗಾರಿಗಳಿಂದ ಜನತೆಗೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎನ್ನುವುದನ್ನು ಪತ್ತೆ ಹಚ್ಚುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮಲ್ಲಿಕಾರ್ಜುನ, ಸೋಲಬಣ್ಣ, ಶಿವಪ್ಪ ನಾಯಕ, ಕುಮಾರ ಚಪ್ಪಳಕಿ, ಮುಖಂಡರಾದ ಶಂಕರಗೌಡ, ಮೋಹನ್ ದೇಸಾಯಿ, ಬಿಎಪ್ಟಿ ರವಿ ನಾಯಕ, ಗ್ರಾ.ಪಂ ಸಿಬ್ಬಂದಿಗಳಾದ ಮುದ್ದರಂಗಪ್ಪ ಯರಕಮಟ್ಟಿ, ಯಂಕೋಬ,ಬಸವರಾಜ, ನಾಗರಾಜ ಇದ್ದರು.