ಜಾಲಹಳ್ಳಿ ಗ್ರಾಪಂನಲ್ಲಿ ಅರಳಿದ ಕಮಲ

ಫಲಿಸದ ಮೈತ್ರಿ ಒಕ್ಕೂಟದ ತಂತ್ರ, ಚೀಟಿಯಲ್ಲಿ ಅಡಗಿತ್ತು ಅದೃಷ್ಟ
ದೇವದುರ್ಗ,ಮಾ.೦೭- ತಾಲೂಕಿನ ಜಾಲಹಳ್ಳಿ ಗ್ರಾಪಂಯಲ್ಲಿ ಮತ್ತೊಮ್ಮೆ ಬಿಜೆಪಿ ಅರಳಿದ್ದು, ಮೂರು ಸೂತ್ರ ಹೆಣೆದಿದ್ದ ಕಾಂಗ್ರೆಸ್‌ಗೆ ಅದೃಷ್ಟ ಕೈಕೊಟ್ಟಿದೆ. ಬಿಜೆಪಿ ಬೆಂಬಲಿತ ರೇವತಿ ಶಂಕರಗೌಡ ಪಾಟೀಲ್ ನೂತನ ಅಧ್ಯಕ್ಷೆಯಾಗಿ ಸೋಮವಾರ ಆಯ್ಕೆಯಾದರು.
ಚುನಾವಣಾಧಿಕಾರಿ ತಾಪಂ ಇಒ ಪಂಪಾಪತಿ ಹಿರೇಮಠ ನೇತೃತ್ವದಲ್ಲಿ ಜರುಗಿದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರೇವತಿ ಶಂಕರಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಹನುಮಂತಿ ರಾಮಪಳ್ಳಿ ನಾಮಪತ್ರ ಸಲ್ಲಿಸಿದ್ದರು. ೩೩ಸದಸ್ಯ ಮತದಾರಲ್ಲಿ ಒಬ್ಬರು ಗೈರಾಗಿದ್ದು, ಇಬ್ಬರಿಗೂ ತಲಾ ೧೬ಮತಗಳು ಬಿದ್ದಿವೆ.
ಪಂಚಾಯತ್ ರಾಜ್ ಕಾಯ್ದೆ ೨೧ಅಡಿ ಚೀಟಿ ಎತ್ತು ಮೂಲಕ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಚೀಟಿಯಲ್ಲಿ ರೇವತಿ ಶಂಕರಗೌಡ ಪಾಟೀಲ್ ಹೆಸರು ಬಂದಿರುವುದರಿಂದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು. ಗ್ರಾ.ಪಂ ಸದಸ್ಯ ಗುರು ನಾಯಕ ಸರ್ಕಾರಿ ಸೇವೆಗೆ ಆಯ್ಕೆಯಾಗಿದ್ದು ದಾಖಲೆ ಪರಿಶೀಲನೆ ತೆರಳಿದ್ದರಿಂದ ಗೈರಾಗಿದ್ದರು. ಪಿಡಿಒ ಪತ್ಯಾಪ್ಪ ರಾಠೋಡ್, ಆಶೋಕ್, ಯಂಕೋಬ ಪಲಕನಮರಡಿ ಹಾಗೂ ಗ್ರಾಪಂ ಸದಸ್ಯರು ಇದ್ದರು.
ತಲೆಕೆಳಗಾದ ಲೆಕ್ಕಾಚಾರ:
ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾದ ಜಾಲಹಳ್ಳಿ ಗ್ರಾಪಂಯಲ್ಲಿ ೧೬ಬಿಜೆಪಿ ಬೆಂಬಲಿತ, ೧೧ಕಾಂಗ್ರೆಸ್, ೫ಸಿಪಿಐಎಂ ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಸರಳ ಬಹುಮತಕ್ಕೆ ೧೭ಸ್ಥಾನ ಬೇಕಿತ್ತು. ಅಂದು ಕಾಂಗ್ರೆಸ್ ನಾಯಕರು ಮಧ್ಯ ಪ್ರವೇಶ ಮೂಡಿ ಮೂರು ಸೂತ್ರ ಹೆಣೆದಿದ್ದರು. ತಲಾ ಹತ್ತು ತಿಂಗಳು ಕಾಂಗ್ರೆಸ್, ಪಕ್ಷೇತರ ಹಾಗೂ ಸಿಪಿಐಎಂ ಬೆಂಬಲಿತರಿಗೆ ಬಿಟ್ಟುಕೊಡುವ ಒಪ್ಪಂದವಾಗಿತ್ತು. ಕಾಂಗ್ರೆಸ್ ಬೆಂಬಲಿತ ಅಯ್ಯಪ್ಪಸ್ವಾಮಿ ಮೊದಲು ೧೦ತಿಂಗಳು ಅಧ್ಯಕ್ಷರಾಗಿದ್ದು ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಆದರೆ, ಹನುಮಂತಿ ರಾಮಪಳ್ಳಿ ಅದೃಷ್ಟ ಕೈಕೊಟ್ಟಿದೆ.