ಜಾಲತಾಣದಲ್ಲಿ ಪ್ರಚಾರ ವಾಟ್ಸಾಪ್ ಆಡ್ಮಿನ್ ವಿರುದ್ಧ ಕ್ರಮ

ವಿಧಾನಸಭೆ ಚುನಾವಣೆ ಬೆಂಗಳೂರು ವ್ಯಾಪ್ತಿಯ ೨೮ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪಾಲಿಕೆಯ ಕೇಂದ್ರ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಮಾಹಿತಿ ಕಾರ್ಯಗಾರದಲ್ಲಿ ವಿಶೇಷ ಆಯುಕ್ತ (ಚುನಾವಣೆ) ಉಜ್ವಲ್ ಕುಮಾರ್ ಘೋಷ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಜಂಟಿ ಆಯುಕ್ತ ಡಾ. ನಾಗರಾಜ್, ಎಂಸಿಎಂಸಿ ಟ್ರೈನರ್ ಮೋಹನ್ ಕುಮಾರ್ ಇದ್ದಾರೆ.

ಬೆಂಗಳೂರು, ಏ.೭- ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಸಾಮಾಜಿಕ ಜಾಲತಾಣದ ಟ್ರೋಲ್ ಪೇಜ್ ಹಾಗೂ ವಾಟ್ಸಾಪ್ ಆಡ್ಮಿನ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಚುನಾವಣೆ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ-೨೦೨೩ರ ಸಂಬಂಧ ಬೆಂಗಳೂರು ವ್ಯಾಪ್ತಿಯ ೨೮ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣೆಯ ಮಾಹಿತಿ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಬಾರಿ ಸಾಮಾಜಿಕ ಜಾಲತಾಣ ಬಳಕೆದಾರರ ಮೇಲೆ ಚುನಾವಣೆ ಆಯೋಗ ವಿಶೇಷ ನಿಗಾ ಇಟ್ಟಿದ್ದು, ಹೆಚ್ಚು ಬಳಕೆ ಆಗುವ ವಾಟ್ಸಾಪ್ ಗ್ರೂಪ್ ಟ್ರೋಲ್ ಪೇಜ್‌ಗಳ ಆಡ್ಮಿನ್ ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಇನ್ನೂ, ಅಭ್ಯರ್ಥಿಗಳ ಪರವಾಗಿ ಮತಯಾಚನೆ, ಪ್ರಭಾವ ಬೀರುವ ಸಂದೇಶಗಳು ಬಂದಲ್ಲಿ ನೇರವಾಗಿ ಆಯೋಗಕ್ಕೆ ದೂರು ನೀಡಬಹುದು ಎಂದು ಅವರು ತಿಳಿಸಿದರು.
ಆನ್ ಲೈನ್ ನಗದು ನಿಗಾ: ನ್ಯಾಯ ಸಮ್ಮತ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಗೂಗಲ್ ಪೇ ಇನ್ನಿತರ ಇ-ಅಕೌಂಟ್‌ಗಳಿಂದ ಬೇರೆ ಬೇರೆ ಅಕೌಂಟ್‌ಗಳಿಗೆ ಹಣ ಸಂದಾಯವಾಗಿರುವ ಬಗ್ಗೆ ಪ್ರಕರಣ ದಾಖಲಾದರೆ ಆ ಬಗ್ಗೆ ತನಿಖೆ ನಡೆಸಲಾಗುವುದು.
ಒಂದೇ ಅಕೌಂಟ್‌ನಿಂದ ಸುಮಾರು ೫೦ ರಿಂದ ೧೦೦ ಮಂದಿಗೆ ಪದೇ ಪದೆ ಹಣ ಪಾವತಿ ಆದರೆ ಅಂತಹವರ ವಿರುದ್ಧ ಕೂಡ ಚುನಾವಣ ಆಯೋಗದ ನಿಯಮದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಇನ್ನೂ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಾಹಿರಾತು ನೀಡುವ ರಾಜಕೀಯ ಪಕ್ಷ, ರಾಜಕೀಯ ವ್ಯಕ್ತಿಗಳು ಪೂರ್ವಾನುಮತಿ ಪಡೆಯಬೇಕು. ವರ್ಷವಿಡೀ ಪ್ರಕಟ ಮಾಡುವ ರಾಜಕೀಯ ಪ್ರೇರಿತ ಜಾಹೀರಾತಿಗೂ ಇದು ಅನ್ವಯವಾಗುತ್ತದೆ.

ಈ ಜಾಹಿರಾತಿನಲ್ಲಿ ವೈಯಕ್ತಿಕ ನಿಂದನೆ, ಜಾತಿ, ಧರ್ಮ ಸೂಚಿಸುವ ಯಾವುದೇ ಉಲ್ಲೇಖವಿರಬಾರದು. ನಾಮಪತ್ರ ಸಲ್ಲಿಕೆ ಆರಂಭವಾದ ಮೇಲೆ ವೆಚ್ಚವನ್ನು ಪರಿಗಣಿಸಲಾಗುತ್ತದೆ. ಅಭ್ಯರ್ಥಿ ಪರ ಅಥವಾ ವಿರುದ್ಧವಾಗಿ ಪ್ರಕಟವಾಗುವ ಸುದ್ದಿಗಳು ಸುಳ್ಳುಸುದ್ದಿ ಎಂದು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.

ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ವಿಧಾನಸಭಾ ಚುನಾವಣಾ ಮಾಹಿತಿ ಪ್ರಕಟಿಸುವ ವೇಳೆ ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವುದರ ಜೊತೆಗೆ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದ್ದಾರೆ.

ಹಾಗೇ, ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟ ಮಾಡುವ ಮುನ್ನ ಎಂಸಿ ಅಂಡ್ ಎ ಕಮಿಟಿಯ ಪೂರ್ವ ಪ್ರಮಾಣಿಕರಣ ಪಡೆದಿರಬೇಕು. ಮುದ್ರಣ ಮಾಧ್ಯಮಕ್ಕೆ ಮತದಾನದ ಮುಂಚಿನ ೪೮ ಗಂಟೆಗಳ ಅವಗೆ ಅನ್ವಯವಾಗಲಿದೆ. ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿಯ ಡಾ.ನಾಗರಾಜ್ ಜಂಟಿ ಆಯುಕ್ತ, ಎಂಸಿಎಂಸಿ ತರಬೇತುದಾರ ಮೋಹನ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.