ಜಾಲತಾಣಗಳ ಮೇಲೆ ನಿಗಾವಹಿಸಿ:ಸಿಎಂ

ಬೆಂಗಳೂರು,ಸೆ.೧೫-ಸುಳ್ಳು ಸುದ್ದಿಗಳನ್ನು ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿ ಸೈಬರ್ ಅಪರಾಧ ಕೃತ್ಯಗಳನ್ನು ಮಟ್ಟಹಾಕಿ ಠಾಣೆಗೆ ದೂರು ನೀಡಲು ಬರುವ ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಇಂತಹ ಅಪರಾಧಗಳನ್ನು ನಿಯಂತ್ರಿಸಲು ಹೆಚ್ಚಿನ ಶ್ರಮವಹಿಸಬೇಕು ಎಂದರು.
ಮನಸ್ಸಿಗೆ ಬಂದಂತೆ ಅವಹೇಳನಕಾರಿ ಪೋಸ್ಟ್ ಹಾಗೂ ಕಮೆಂಟ್ ಪ್ರಕಟಿಸುತ್ತಿದ್ದು ಇಂಥ ನಡವಳಿಕೆಯನ್ನು ಹತ್ತಿಕ್ಕಬೇಕು
ಸೈಬರ್ ಕ್ರೈಂ ಅಪರಾಧಗಳ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅವುಗಳ ತಡೆಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ಕೆಲ ಲೋಪದೋಷಗಳಿರುವುದು ಗಮನಕ್ಕೆ ಬಂದಿದ್ದು ಅದನ್ನು ನಿವಾರಿಸಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡದೆ ಕೆಲಸ ಮಾಡಬೇಕು ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಜನರು ಯಾವುದೇ ಭಯವಿಲ್ಲದೇ ಧೈರ್ಯವಾಗಿ ಠಾಣೆಗೆ ಬಂದು ದೂರು ನೀಡಬೇಕು.ಅಂಥ ಜನಸ್ನೇಹಿ ವಾತಾವರಣ ನಿರ್ಮಿಸಬೇಕು, ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಲಿದ್ದು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಅಪರಾಧ ನಿಯಂತ್ರಣ, ಅಪರಾಧ ಪತ್ತೆಯಲ್ಲಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.ಸೈಬರ್ ಅಪರಾಧ, ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕರ್ನಾಟಕ ಪೊಲೀಸ್ ಇಲಾಖೆ ದಕ್ಷತೆ, ಪ್ರಾಮಾಣಿಕತೆಯ ಪರಂಪರೆಯನ್ನು ಹೊಂದಿದೆ. ಅತ್ಯಂತ ಒತ್ತಡ, ಸವಾಲಿನ ಸನ್ನಿವೇಶದಲ್ಲಿಯೂ ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿಯೂ ಸ್ವಚ್ಛ, ದಕ್ಷ ಮತ್ತು ಒತ್ತಡಮುಕ್ತವಾಗಿ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷದಲ್ಲಿ ಮಾದಕವಸ್ತುಗಳನ್ನು ದಾಖಲೆ ಪ್ರಮಾಣದಲ್ಲಿ ವಶಪಡಿಸಿಕೊಳ್ಳ ಲಾಗಿದ್ದು, ಶಾಲೆ, ಕಾಲೇಜುಗಳ ಸಮೀಪ ಮಾದಕವಸ್ತುಗಳು ಲಭ್ಯ ವಾಗದಂತೆ ಪೊಲೀಸ್ ಠಾಣೆಯ ಹಂತದಲ್ಲಿಯೇ ಆದ್ಯತೆಯ ಮೇರೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಡಿಜಿಪಿ ಗಳಾದ ಕಮಲ್ ಪಂತ್, ರವೀಂದ್ರನಾಥ, ಪ್ರಶಾಂತ್ ಕುಮಾರ್ ಠಾಕೂರ್,ಎಂ.ಎ.ಸಲೀಂ,ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿದಂತೆ ರಾಜ್ಯದ ಬಹುತೇಕ ಐಪಿಎಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.