ಜಾರ್ಜಿಯಾದಲ್ಲಿ ಹಿಂದೂಫೋಬಿಯಾ ಖಂಡಿಸುವ ನಿರ್ಣಯ ಅಂಗೀಕಾರ

ಜಾರ್ಜಿಯಾ (ಅಮೆರಿಕಾ), ಎ.೧- ಇತ್ತೀಚಿಗಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ವಿಶ್ವದ ಹಲವು ಕಡೆಗಳಲ್ಲಿ ದಾಳಿಗಳು ನಡೆಯುತ್ತಿದೆ. ಈ ನಡುವೆ ಅಮೆರಿಕಾದ ಜಾರ್ಜಿಯಾ ರಾಜ್ಯದ ಅಸೆಂಬ್ಲಿಯಲ್ಲಿ ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ. ಈ ಮೂಲಕ ಜಾರ್ಜಿಯಾವು ಹಿಂದೂಫೋಬಿಯಾ ಖಂಡಿಸುವ ನಿರ್ಣಯ ತೆಗೆದುಕೊಂಡ ಅಮೆರಿಕಾದ ಮೊದಲ ರಾಜ್ಯವಾಗಿದೆ. ಸಹಜವಾಗಿಯೇ ಇದು ಅಮೆರಿಕಾದಲ್ಲಿ ನೆಲೆಸಿರುವ ಅಸಂಖ್ಯಾತ ಹಿಂದೂ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅಮೆರಿಕಾದ ಇತರೆ ರಾಜ್ಯಗಳಲ್ಲೂ ನಿರ್ಣಯಕ್ಕೆ ಅಂಗೀಕಾರ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಾರ್ಜಿಯಾದಲ್ಲಿನ ಅತಿದೊಡ್ಡ ಹಿಂದೂ ಮತ್ತು ಭಾರತೀಯ-ಅಮೆರಿಕನ್ ಸಮುದಾಯಗಳಲ್ಲಿ ಒಂದಾದ ಅಟ್ಲಾಂಟಾದ ಉಪನಗರದಲ್ಲಿರುವ ಫೋರ್ಸಿತ್ ಕೌಂಟಿಯ ಪ್ರತಿನಿಧಿಗಳಾದ ಲಾರೆನ್ ಮೆಕ್‌ಡೊನಾಲ್ಡ್ ಮತ್ತು ಟಾಡ್ ಜೋನ್ಸ್ ಹಿಂದೂಫೋಬಿಯಾ ನಿರ್ಣಯವನ್ನು ಅಸೆಂಬ್ಲಿಯಲ್ಲಿ ಪರಿಚಯಿಸಿದರು. ವೈದ್ಯಕೀಯ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಆತಿಥ್ಯ, ಹಣಕಾಸು, ಶೈಕ್ಷಣಿಕ, ಉತ್ಪಾದನೆ, ಇಂಧನ, ಚಿಲ್ಲರೆ ವ್ಯಾಪಾರದಂತಹ ವೈವಿಧ್ಯಮಯ ಕ್ಷೇತ್ರಗಳಿಗೆ ಅಮೆರಿಕನ್-ಹಿಂದೂ ಸಮುದಾಯವು ಪ್ರಮುಖ ಕೊಡುಗೆ ನೀಡಿದೆ. ಯೋಗ, ಆಯುರ್ವೇದ, ಧ್ಯಾನ, ಆಹಾರ, ಸಂಗೀತ, ಕಲೆಗಳ ಸಮುದಾಯದ ಕೊಡುಗೆಗಳು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿವೆ ಮತ್ತು ಅಮೆರಿಕಾದ ಸಮಾಜದಲ್ಲಿ ವ್ಯಾಪಕವಾಗಿ ಅಳವಡಿಸಿಕೊಂಡಿವೆ. ಅಲ್ಲದೆ ಲಕ್ಷಾಂತರ ಜನರ ಜೀವನವನ್ನು ಹೆಚ್ಚಿಸಿವೆ ಎಂದು ಅವರು ತಮ್ಮ ಪರಿಚಯ ನಿರ್ಣಯದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಕಳೆದ ಕೆಲವು ದಶಕಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಹಿಂದೂ-ಅಮೆರಿಕನ್ನರ ವಿರುದ್ಧ ದ್ವೇಷದ ಅಪರಾಧಗಳ ದಾಖಲೀಕರಣದ ನಿದರ್ಶನಗಳಿವೆ ಎಂದು ತಿಳಿಸುವ ನಿರ್ಣಯವು ಹಿಂದೂ ಧರ್ಮದ ವಿಘಟನೆಯನ್ನು ಬೆಂಬಲಿಸುವ ಮತ್ತು ಅದರ ಪವಿತ್ರ ಗ್ರಂಥಗಳನ್ನು ದೂಷಿಸುವ ಕೆಲವು ಶೈಕ್ಷಣಿಕ ಸಂಸ್ಥೆಗಳಿಂದ ಹಿಂದೂಫೋಬಿಯಾ ಉಲ್ಬಣಗೊಂಡಿದೆ ಮತ್ತು ಸಾಂಸ್ಥಿಕವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಅದೂ ಅಲ್ಲದೆ ಈ ನಿಟ್ಟಿನಲ್ಲಿ ಮಾರ್ಚ್ ೨೨ ರಂದು ಜಾರ್ಜಿಯಾ ರಾಜಧಾನಿಯಲ್ಲಿ ನಡೆದ ಮೊಟ್ಟಮೊದಲ ಹಿಂದೂ ವಕೀಲರ ದಿನವನ್ನು ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ (ಸಿಒಹೆಚ್‌ಎನ್‌ಎ) ಅಟ್ಲಾಂಟಾ ಅಧ್ಯಾಯವು ಮುನ್ನಡೆಸಿದೆ. ಈ ಸಮಾವೇಶದಲ್ಲಿ ಅಮೆರಿಕಾದ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಎರಡೂ ಪಕ್ಷದ ಸುಮಾರು ೨೫ ಶಾಸಕರು ಭಾಗವಹಿಸಿದ್ದು, ವಿಶೇಷವಾಗಿತ್ತು. ಈ ಸಮಾವೇಶದಲ್ಲಿ ಹಿಂದೂ ಸಮುದಾಯದ ಕಳವಳಗಳನ್ನು ಅರ್ಥಮಾಡಿಕೊಳ್ಳಲು, ತಾರತಮ್ಯದಿಂದ ಸಮುದಾಯವನ್ನು ರಕ್ಷಿಸಲು ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಹಿಂದೂಗಳ ಮನವಿಗಳನ್ನು ಸೇರಿಸಲು ಅನುಕೂಲವಾಗುವಂತೆ ಪ್ರತಿಜ್ಞೆ ಮಾಡಲಾಗಿತ್ತು. ವಿಶ್ವದಾದ್ಯಂತ ೧೨೦ ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಹಿಂದೂಗಳ ವಿರುದ್ಧ ಇತ್ತೀಚಿಗಿನ ದಿನಗಳಲ್ಲಿ ನಿರಂತರ ದಾಳಿಯಾಗುತ್ತಿದ್ದು, ಅದರಲ್ಲೂ ಆಸ್ಟ್ರೇಲಿಯಾ, ಕೆನಡಾ ಮುಂತಾದ ದೇಶಗಳಲ್ಲಿ ದೇವಾಲಯಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಈ ಸಮಯದಲ್ಲಿ ಅಮೆರಿಕಾದ ರಾಜ್ಯವೊಂದರಲ್ಲಿ ಹಿಂದೂಫೋಬಿಯಾ ಖಂಡಿಸುವ ನಿರ್ಣಯ ಅಂಗೀಕರಿಸಿರುವುದು ಹಿಂದೂ ಸಮುದಾಯದಲ್ಲಿ ಸಹಜವಾಗಿಯೇ ಸಂತಸ ಮೂಡಿಸಿದೆ.