ಜಾರ್ಖಂಡ್‌ನಲ್ಲಿ ಯಾಸ್ ಅಬ್ಬರ ತೀವ್ರ ಕಟ್ಟೆಚ್ಚರ

ರಾಂಚಿ,(ಜಾರ್ಖಂಡ್) ಮೇ ೨೭-ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸುರಿಸುತ್ತಾ ಭಾರೀ ಪ್ರಮಾಣದ ಹಾನಿಯುಂಟು ಮಾಡಿರುವ ಯಾಸ್ ಚಂಡಮಾರುತವು ಜಾರ್ಖಂಡ್ ಪ್ರವೇಶಿಸಿ ಆತಂಕ ಸೃಷ್ಟಿಸಿದೆ.
ಯಾಸ್ ಚಂಡಮಾರುತದಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ತಗ್ಗಿಸಲು ಜಾರ್ಖಂಡ್ ರಾಜ್ಯ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದ್ದು, ಸುಮಾರು ೧೨ ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಈಗಾಗಲೇ ಯಾಸ್ ಚಂಡಮಾರುತದಿಂದ ೮ ಲಕ್ಷ ಜನರ ಜೀವನದ ಮೇಲೆ ಪರಿಣಾಮ ಉಂಟಾಗಿದ್ದು, ಜನರು ಹೊರಗೆ ಓಡಾಡುವುದನ್ನು ತಪ್ಪಿಸಲು ರಾಜ್ಯದ ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ಯಾಸ್ ಚಂಡಮಾರುತವು ನಿನ್ನೆಯಿಂದ ಗಂಟೆಗೆ ೧೩೦ರಿಂದ ೧೪೫ ಕಿ.ಮೀ. ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿಗೆ ಅಪ್ಪಳಿಸಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿಗೆ ಕಾರಣವಾಗಿದೆ.
ವ್ಯಕ್ತಿ ಸಾವು ನೋವು ಹೆಚ್ಚಳ:
ಎರಡೂ ರಾಜ್ಯಗಳಲ್ಲಿ ಭಾರಿ ಮಳೆ ಸುರಿದಿದೆ. ಮನೆಗಳು ಮತ್ತು ಹೊಲಗಳು ಹಾನಿಗೀಡಾಗಿವೆ. ಒಡಿಶಾದಲ್ಲಿ ಮೂವರು ಮತ್ತು ಬಂಗಾಳದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಸಿಂಡೆಗಾ, ಪೂರ್ವ ಮತ್ತು ಪಶ್ಚಿಮ ಸಿಂಹಭೂಮ, ಸರಾಯ್‌ಕೆಲಾ?ಖರಸಾವಾ ಜಿಲ್ಲೆಗಳಲ್ಲಿ ಕನಿಷ್ಠ ಎಂಟು ಲಕ್ಷ ಜನರ ಬದುಕಿನ ಮೇಲೆ ಚಂಡಮಾರುತ ಪರಿಣಾಮ ಉಂಟು ಮಾಡಿದೆ. ಈ ಪ್ರದೇಶಗಳಲ್ಲಿ ಗಂಟೆಗೆ ೯೨-೧೧೭ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಮರೋಪಾದಿ ಕೆಲಸ:
ಯಾಸ್ ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪೂರ್ವ ಮತ್ತು ಪಶ್ಚಿಮ ಸಿಂಹಭೂಮ ಪ್ರದೇಶ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳು ಪರಿಸಮರೋಪಾದಿಯಲ್ಲಿ ನಡೆಯುತ್ತಿವೆ.
’ಒಟ್ಟು ೮೪೮ ಹಳ್ಳಿಗಳ ಮೇಲೆ ಚಂಡಮಾರುತದ ಪರಿಣಾಮವಾಗಿದ್ದು, ೩೧೦ ಆಶ್ರಯ ಕೇಂದ್ರಗಳಿಗೆ ೧೦,೭೬೭ ಜನರನ್ನು ಸ್ಥಳಾಂತರಿಸಿದ್ದೇವೆ. ಬಿರುಸಾದ ಗಾಳಿ ಬೀಸುತ್ತಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು, ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ’ ಎಂದು ಪೂರ್ವ ಸಿಂಹಭೂಮದ ಜಿಲ್ಲಾಧಿಕಾರಿ ಸೂರಜ್ ಕುಮಾರ್ ಹೇಳಿದ್ದಾರೆ.
ತೀವ್ರ ಕಾರ್ಯಾಚರಣೆ:
ರಕ್ಷಣಾ ಕಾರ್ಯಗಳಿಗೆ ಸಜ್ಜಾಗಿರುವಂತೆ ಎನ್‌ಡಿಆರ್‌ಎಫ್ ತಂಡಗಳಿಗೆ ತಿಳಿಸಲಾಗಿದೆ. ಅದಾಗಲೇ ೫೦೦ ವಿಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಿಸುತ್ತಿವೆ. ರಾಜ್ಯದ ಹಲವು ಭಾಗಗಳಲ್ಲಿ ಕೋವಿಡ್?೧೯ ಪರೀಕ್ಷೆಗಳು, ಕೋವಿಡ್ ಲಸಿಕೆ ಕಾರ್ಯಕ್ರಮಗಳನ್ನು ಗುರುವಾರದವರೆಗೂ ಸ್ಥಗಿತಗೊಳಿಸಲಾಗಿದೆ.
ನಕ್ಸಲ್‌ಪೀಡಿತ ಪ್ರದೇಶ ಪೊಲೀಸ್ ಠಾಣೆಗಳಿಗೆ ಸಂವಹನಕ್ಕಾಗಿ ಸ್ಯಾಟಲೈಟ್ ಫೋನ್‌ಗಳನ್ನು ಒದಗಿಸಲಾಗಿದೆ ಎಂದು ಡಿಜಿಪಿ ನೀರಜ್ ಸಿನ್ಹಾ ತಿಳಿಸಿದ್ದಾರೆ.
ಮನೆಯಲ್ಲಿರಲು ಮನವಿ:
’ರಾಜ್ಯ ಸರ್ಕಾರ, ಜಿಲ್ಲಾಡಳಿತ, ಎನ್‌ಡಿಆರ್‌ಎಫ್ ತಂಡಗಳು ಕಟ್ಟೆಚ್ಚರವಹಿಸಿ ಕಾರ್ಯಾಚರಣೆ ನಡೆಸುತ್ತಿದ್ದು ಜನರು ಮನೆಯಲ್ಲಿಯೇ ಇರಿ’ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಮನವಿ ಮಾಡಿದ್ದಾರೆ.
ಒಂದು ವಾರದಲ್ಲಿ ಭಾರತಕ್ಕೆ ಅಪ್ಪಳಿಸಿದ ಎರಡನೇ ಚಂಡಮಾರುತ ಇದಾಗಿದ್ದು. ತೌಕ್ತೆ ಚಂಡಮಾರುತವು ಪಶ್ಚಿಮ ಕರಾವಳಿಗೆ ಕಳೆದ ವಾರ ಅಪ್ಪಳಿಸಿತ್ತು. ಮಹಾರಾಷ್ಟ್ರ, ಗುಜರಾತ್ ಸೇರಿ ಐದು ರಾಜ್ಯಗಳಲ್ಲಿ ಭಾರಿ ಪ್ರಮಾಣದ ಅನಾಹುತಕ್ಕೆ ಕಾರಣವಾಗಿತ್ತು.