ಜಾರಿದಳ ಅಧಿಕಾರಿಗಳ ದಾಳಿ : 28 ಕ್ವಿಂಟಲ್ ಅಕ್ರಮ ಬಿತ್ತನೆ ಬೀಜ ವಶ

ಹೂವಿನಹಡಗಲಿ ಜೂ 10 : ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಕೃಷಿ ಇಲಾಖೆಯ ಜಾರಿದಳ ಅಧಿಕಾರಿಗಳು ದಾಳಿ ನಡೆಸಿ 28 ಕ್ವಿಂಟಲ್ ಅಕ್ರಮ ಮೆಕ್ಕೆಜೋಳ ಬಿತ್ತನೆ ಬೀಜ ವಶಪಡಿಸಿಕೊಂಡಿದ್ದಾರೆ.
ಉತ್ತಂಗಿ ತಾತಪ್ಪಗೌಡ ಹಾಗೂ ರಾಣೇಬೆನ್ನೂರಿನ ಮಂಜುನಾಥ ಎಂಬುವವರು ನಿರ್ಮಾಣ ಹಂತದ ಮನೆಯಲ್ಲಿ ಮಾರಾಟಕ್ಕಾಗಿ ಬೀಜೋಪಚಾರ ಮಾಡಿದ್ದ ಮೆಕ್ಕೆಜೋಳ ಬಿತ್ತನೆ ಬೀಜ ದಾಸ್ತಾನು ಮಾಡಿದ್ದರು. ಮಾಹಿತಿ ಆಧರಿಸಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರಾದ ನಾಗರಾಜ, ಸೈಫುಲ್ಲಾ ಮುಜುಬು ರಹಿಮಾನ್ ನೇತೃತ್ವದ ಜಾರಿದಳ ದಾಳಿ ನಡೆಸಿ, 6.8ಲಕ್ಷ ರೂ. ಮೌಲ್ಯದ 28 ಕ್ವಿಂಟಲ್ ಅಕ್ರಮ ಬಿತ್ತನೆ ಬೀಜ ವಶಪಡಿಸಿಕೊಂಡಿದೆ. ಆರೋಪಿಗಳಾದ ತಾತಪ್ಪಗೌಡ, ಮಂಜುನಾಥ ವಿರುದ್ಧ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೂವಿನಹಡಗಲಿ ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್, ಇಟ್ಟಿಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರವೀಣಕುಮಾರ್ ಸೊಪ್ಪಿನ ದಾಳಿಯಲ್ಲಿ ಭಾಗವಹಿಸಿದ್ದರು.
ಕಳಪೆ ಬೀಜ ಮಾರುವವರ ಮೇಲೆ ಕಠಿಣ ಕ್ರಮ : ನಕಲಿ ಬೀಜ ಮಾರಾಟ ಮಾಡುವವರ ವಿರುದ್ಧ ಕೃಷಿ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್ ಹೇಳಿದರು.
ರೈತರು ನಕಲಿ ಬೀಜ ಖರೀದಿಸಿ ಮೋಸ ಹೋಬಾರದು. ಅಧಿಕೃತ ಬೀಜ ಮಾರಾಟಗಾರರಿಂದ ರಸೀದಿ ಪಡೆದು ಬಿತ್ತನೆ ಬೀಜ ಖರೀದಿಸಬೇಕು. ಅನಧಿಕೃತ ಬೀಜ ಮಾರಾಟಗಾರರ ಕುರಿತು ರೈತರು ಮಾಹಿತಿ ನೀಡಿದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.