ಜಾರಕಿ ಹೊಳಿಗೆ ರಕ್ಷಣೆ ಸರ್ಕಾರದ ವಿರುದ್ಧ ಕೈ ಸಮರ

ಬೆಂಗಳೂರು,. ಏ. ೫- ಸಿ.ಡಿ. ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ದೂರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಸಿ.ಡಿ. ಪ್ರಕರಣದ ಆರೋಪಿಯನ್ನು ಬಂಧಿಸದೆ ಚುನಾವಣಾ ಪ್ರಚಾರಕ್ಕೆ ಸ್ವತಃ ಮುಖ್ಯಮಂತ್ರಿಗಳೆ ಕರೆಯುತ್ತಾರೆ. ಹಾಗೆಯೇ ತನಿಖೆ ನಡೆಸದೆ ಅವರದ್ದು ತಪ್ಪಿಲ್ಲ ಎಂದು ಕ್ಲೀನ್‌ಚೀಟ್ ನೀಡುತ್ತಾರೆ. ನಾವೆಲ್ಲ ಆರೋಪಿ ಬೆಂಬಲಕ್ಕೆ ಇದ್ದೇವೆ ಎಂದು ಹಲವು ಸಚಿವರು ಹೇಳಿಕೆ ನೀಡುತ್ತಾರೆ. ಇವೆಲ್ಲವೂ ಆರೋಪಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎನ್ನಲು ನಿದರ್ಶನ ಎಂದು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಹರಿಹಾಯ್ದಿದೆ.
ರಮೇಶ್ ಜಾರಕಿಹೊಳಿಯ ಅತ್ಯಾಚಾರ ಪ್ರಕರಣವೊಂದೇ ಸಾಕು ಬಿಜೆಪಿ ಆಡಳಿತದ ನಿಜ ಬಣ್ಣ ತಿಳಿಯಲು. ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅತ್ಯಾಚಾರದ ಆರೋಪಿಗೆ ರಾಜ್ಯ ಮರ್ಯಾದೆಯಲ್ಲಿ ನೆಪ ಮಾತ್ರದ ವಿಚಾರಣೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಿ.ಡಿ. ಪ್ರಕರಣದಿಂದ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷ, ಆರೋಪಿ ತಲೆಮರೆಸಿಕೊಳ್ಳುವ ಬಗ್ಗೆ ತಲೆಕೊಂಡಿಸಿಕೊಂಡಿಲ್ಲ. ಆರೋಪಿಯ ಮೊಬೈಲ್‌ನ್ನು ಹಲವು ದಿನಗಳ ವರೆಗೂ ಪೊಲೀಸರು ವಶಪಡಿಸಿಕೊಂಡಿಲ್ಲ. ಸಾಕ್ಷ್ಯ ನಾಶಕ್ಕೆ ಸಮಯ ಬೇಕಿತ್ತೋ, ಏನೋ ಎಂದು ವ್ಯಂಗ್ಯವಾಡಿದೆ.
ಆರೋಪಿ ಮಾಜಿ ಮಂತ್ರಿಯನ್ನು ವಿಚಾರಣೆಗೆ ಕರೆಸಿ ಹಿಂಬಾಗಿಲ ಮೂಲಕ ಕಳುಹಿಸಿರುವ ಪೊಲೀಸರು ಸಂತ್ರಸ್ತೆಗೆ ವಿಶ್ರಾಂತಿಯೂ ನೀಡದಂತೆ ಸತತ ವಿಚಾರಣೆ ನಡೆಸುತ್ತಾರೆ. ಆರೋಪಿಯನ್ನು ಕರೆದುಕೊಂಡು ಹೋಗಿ ಮಹಜರು ಮಾಡುವ ಬದಲಿಗೆ ಸಂತ್ರಸ್ತೆಯನ್ನು ಕಾಡಿಸಿ ಮಹಜರ್ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಆರೋಪಿಯ ಕುಟುಂಬ, ಆರೋಪಿ ವಾಸಿಸುತ್ತಿದ್ದ ಸ್ಥಳ, ಬಳಸುತ್ತಿದ್ದ ಮೊಬೈಲ್ ಎಲ್ಲವನ್ನೂ ವಶಕ್ಕೆ ಪಡೆದು ತನಿಖೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ. ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ನಡೆಸಿದೆ.