ಜಾರಕಿಹೊಳಿ ವಿರುದ್ಧ ರಾಜಕೀಯ ಪ್ರತಿಭಟನೆ ಸರಿಯಲ್ಲ: ಕೆ.ಎಸ್. ಶಿವರಾಮು

ಮೈಸೂರು: ನ.13:- ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಪ್ರೇರಿತರಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಪ್ರಗತಿಪರರು ಸಹಾ ಸತೀಶ್ ಜಾರಕಿಹೊಳಿ ಅವರ ಪರವಾಗಿ ಹೋರಾಟ ನಡೆಸಬಲ್ಲವರಾಗಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷರಾದ ಕೆ.ಎಸ್. ಶಿವರಾಮು ಎಚ್ಚರಿಸಿದರು.
ಸತೀಶ್ ಜಾರಕಿಹೊಳಿ ಅಭಿಮಾನಿಗಳ ಬಳಗದ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಹಿಂದೂ ಎಂಬ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ಯಾವ ಅರ್ಥವಿದೇ ಎಂಬ ಬಗ್ಗೆಯಷ್ಟೇ ಮಾತನಾಡಿದ್ದಾರೆ. ಈ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಬೇಕೇ ಹೊರತು ಅವರ ವಿರುದ್ಧ ಒಂದು ಪಕ್ಷದಿಂದ ಹೇಳಿಲ್ಲ. ಸತೀಶ್ ಜಾರಕಿಹೊಳಿ ಅವರ ಬದ್ಧತೆ ಏನು, ಅವರ ರಾಜಕೀಯ ನಿಲುವೇನು ಎಂಬ ಬಗ್ಗೆ ಅವರ ವಿರುದ್ಧ ಪ್ರತಿಭಟನೆ ನಡೆಸುವವರು ಯೋಚಿಸಬೇಕು. ಬಹುತ್ವದ ಭಾರತದ ಕನಸನ್ನು ಅವರು ಹೊಂದಿದ್ದಾರೆ. ಆದರೆ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಜೊತೆಗೆ, ದೇವರ ದಂಡ ಮುಟ್ಟಿದ ಬಾಲಕನೊಬ್ಬನಿಗೆ ಬಹಿಷ್ಕಾರ ಹಾಕಿದ ಉದಾಹರಣೆಯೂ ರಾಜ್ಯದಲ್ಲಿದೆ. ಈ ವೇಳೆ ಹಿಂದೂ ಧರ್ಮಕ್ಕೆ ಕಳಂಕ ಬರಲಿಲ್ಲವೇ, ಇನ್ನೂ ಬಹಳಷ್ಟು ಕಡೆ ಶೂದ್ರ, ದಲಿತ ಸಮುದಾಯದವರನ್ನು ದೇವಾಲಗಳಿಗೆ ಸೇರಿಸುತ್ತಿಲ್ಲ. ಹಿಂದೂ ಧರ್ಮ ಅಸಮಾನತೆಯ ಗೂಡಾಗಿದೆ. ಹಿಂದೂ ಧರ್ಮದ ಹೆಸರಿನಲ್ಲಿ ಓಟ್ ಬ್ಯಾಂಕ್‍ಗಾಗಿ ಅಸಹ್ಯ ರಾಜಕಾರಣ ಮಾಡಲಾಗುತ್ತಿದೆ. ಸಾಮರ್ಥ್ಯ ಇದ್ದರೆ ಪ್ರತಿಭಟಿಸುವವರು ಹಿಂದೂ ಧರ್ಮದಲ್ಲಿನ ಅಸಮಾನತೆ ಹೋಗಲಾಡಿಸಲಿ ಎಂದು ಸವಾಲು ಹಾಕಿದರು.
ಅಲ್ಲದೆ, ಸತೀಶ್ ಜಾರಕಿಹೊಳಿ ಅವರು ಯಾರಿಗಾದರೂ ನೋವಾಗಿದ್ದರೆ ವಿಷಾದಿಸುವುದಾಗಿ ಹೇಳಿದ್ದಾರೆ. ಆದರೂ ಅವರ ವೈಯಕ್ತಿಕ ತೇಜೋವಧೆ ಸರಿಯಲ್ಲ. ತಾವೆಲ್ಲ ಅವರ ಪರ ಇದ್ದೇವೆಂದರು.
ನಾಗಭೂಷಣ್, ಶಿವಮಲ್ಲು, ಯೋಗೀಶ್ ಉಪ್ಪಾರ್, ಸೋಸಲೆ ಮಹೇಶ್, ನಾಗೇಶ್, ರವಿನಂದನ್, ಎಸ್.ಆರ್. ರವಿಕುಮಾರ್ ಹಾಜರಿದ್ದರು.