ಜಾರಕಿಹೊಳಿ ರಾಸಲೀಲೆ: ವರದಿ ಪರಿಶೀಲಿಸಲು ಸೂಚನೆ

ಬೆಂಗಳೂರು,ನ.೧೦- ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ರಾಸಲೀಲೆ ಪ್ರಕರಣ ಹಾಗೂ ಸುಲಿಗೆ ಆರೋಪದ ಪ್ರತಿದೂರು ಕುರಿತ ವರದಿಗಳನ್ನು ಪರಿಶೀಲಿಸುವಂತೆ ಹೈಕೋರ್ಟ್ ಪೊಲೀಸ್ ವಿಶೇಷ ತನಿಖಾ ತಂಡ(ಎಸ್ ಐಟಿ) ಮುಖ್ಯಸ್ಥರಿಗೆ ಸೂಚನೆ ನೀಡಿದೆ.
ಈ ವರ್ಷದ ಆರಂಭದಲ್ಲಿ ಜುಲೈನಲ್ಲಿ ಎಸ್‌ಐಟಿ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ದೂರುಗಳ ತನಿಖೆಯ ವರದಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದಾಗ ಅವುಗಳನ್ನು ಕೆಳ ಅಥವಾ ಅಧೀನ ನ್ಯಾಯಾಲಯದಲ್ಲಿ ಸಲ್ಲಿಸಲು ಅನುಮತಿ ಕೋರಿತ್ತು.
ವೈಯಕ್ತಿಕ ಕಾರಣಗಳಿಂದಾಗಿ ಮೇ ಯಿಂದ ಜುಲೈ ವರೆಗೆ ತನಿಖೆಯ ಪ್ರಮುಖ ಭಾಗಕ್ಕೆ ರಜೆಯ ಮೇಲೆ ಎಸ್‌ಐಟಿ ಮುಖ್ಯಸ್ಥರು ಗೈರಾಗಿದ್ದನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ.
ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ತನಿಖೆ ನಡೆಸಿದ ನಂತರ ಅದರ ವರದಿಗಳನ್ನು ಮರು ಸಲ್ಲಿಸುವಂತೆ ಹೈಕೋರ್ಟ್ ಎಸ್‌ಐಟಿಗೆ ಹೇಳಿದೆ.
ತನಿಖೆಯ ಅಂತಿಮ ವರದಿಗಳನ್ನು ಸೂಕ್ತ ಆದೇಶಕ್ಕಾಗಿ ಎಸ್‌ಐಟಿ ಮುಖ್ಯಸ್ಥರ ಮುಂದೆ ಇಡಬೇಕಿತ್ತು. ಹೀಗಾಗಿ ಎಸ್‌ಐಟಿ ಮುಖ್ಯಸ್ಥರು ತನಿಖಾ ವರದಿಯನ್ನು ಪರಿಶೀಲಿಸಿ ವರದಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಸಲ್ಲಿಸಲು ಸೂಚಿಸಿ ಪ್ರಕರಣದ ವಿಚಾರಣೆಯನ್ನು ಇದೇ ನವೆಂಬರ್ ೨೯ ಕ್ಕೆ ಹೈಕೋರ್ಟ್ ಮುಂದೂಡಿದೆ.
ಎಸ್‌ಐಟಿ ತನಿಖೆಯ ಅಂತಿಮ ವರದಿಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯ ಅಡ್ವೋಕೇಟ್ ಜನರಲ್ ಮಾಡಿದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿಲ್ಲ. ಬದಲಾಗಿ ಜುಲೈ ೨೭ ರಂದು, ಬಿಜೆಪಿ ಶಾಸಕರ ವಿರುದ್ಧದ ಅತ್ಯಾಚಾರದ ಆರೋಪದ ತನಿಖೆಯಲ್ಲಿ ಅಂತಿಮ ವರದಿ ಸಲ್ಲಿಸದಂತೆ ಮತ್ತು ಶಾಸಕರು ಮಾಡಿದ ಸುಲಿಗೆ ಆರೋಪಗಳ ಸಮಾನಾಂತರ ತನಿಖೆ ನಡೆಸುವಂತೆ ಹೈಕೋರ್ಟ್? ಸೂಚಿಸಿದೆ.
ಮಾರ್ಚ್ ೨ ರಂದು ದೂರದರ್ಶನ ವಾಹಿನಿಗಳಲ್ಲಿ ಲೈಂಗಿಕ ಸಿಡಿ ಪ್ರಸಾರವಾದ ನಂತರ ಮಾರ್ಚ್ ೩ ರಂದು ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರ ಎಸ್‌ಐಟಿ ಜುಲೈ ೧೯ ರಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ಮಾಡಿದ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಮಾಜಿ ಸಚಿವರು ಮಾಡಿದ ಸುಲಿಗೆ ಆರೋಪಗಳ ತನಿಖೆಯ ಪ್ರಗತಿಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿತು.
ತನಿಖೆಯ ಸಂದರ್ಭದಲ್ಲಿ ಎಸ್‌ಐಟಿ ಮುಖ್ಯಸ್ಥರು ಸುಮಾರು ಮೂರು ತಿಂಗಳ ಕಾಲ ರಜೆಯಲ್ಲಿದ್ದರೂ ಎಸ್‌ಐಟಿಯಿಂದ ತನಿಖೆ ಹೇಗೆ ನಡೆಸಲಾಯಿತು ಎಂದು ಸದ್ಯ ಕರ್ನಾಟಕ ಹೈಕೋರ್ಟ್ ಪ್ರಶ್ನೆ ಎತ್ತಿದೆ. ಅಂದರೆ ಎಸ್?ಐಟಿ ಮುಖ್ಯಸ್ಥರು ತಮ್ಮ ಅಭಿಪ್ರಾಯವನ್ನು ಹೇಳಿದ ಮೇಲೆ ಹೈಕೋರ್ಟ್ ತನ್ನ ತೀರ್ಪು ನೀಡುವುದಾಗಿ ಸೂಚಿಸಿದೆ.