ಜಾರಕಿಹೊಳಿಗೆ ಕೊರೊನಾವಂತೆ!: ವಿಚಾರಣೆಗೆ ಗೈರು

ಬೆಂಗಳೂರು, ಏ.೫-ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊರೊನಾ ನೆಪಮಾಡಿ ವಿಚಾರಣೆಯಿಂದ ದೂರ ಉಳಿದಿದ್ದಾರೆ.
ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಐಸೋಲೇಷನ್‌ನಲ್ಲಿ ಇರುವುದರಿಂದ ವಿಚಾರಣೆಗೆ ಕೆಲದಿನಗಳ ವಿನಾಯಿತಿ ನೀಡುವಂತೆ, ತಮ್ಮ ಪರ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ರಾಸಲೀಲೆ ಸಿಡಿ ಯುವತಿಯು ನ್ಯಾಯಾಧೀಶರ ಮುಂದೆ ಸೆಕ್ಷನ್ ೧೬೪, ಪೊಲೀಸರ ಮುಂದೆ ಸೆಕ್ಷನ್ ೧೬೧ ಅನ್ವಯ ಹೇಳಿಕೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಸ್ಥಳ ಮಹಜರುಗೆ ಸಹಕರಿಸಿರುವುದರಿಂದ ಬಂಧನದ ಭೀತಿಯಲ್ಲಿರುವ ರಮೇಶ್ ಜಾರಕಿಹೊಳಿ ಅವರು ವಿಚಾರಣೆಗೆ ಹಾಜರಾಗಲು ಕೊರೊನಾ ನೆಪಮಾಡಿ ವಿಚಾರಣೆಗೆ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಅವರು ವಿಚಾರಣೆಗೆ ಹಾಜರಾಗಿದ್ದರೆ ಸತತ ಐದು ದಿನಗಳಿಂದ ವಿಚಾರಣೆಗೆ ಹಾಜರಾಗಿರುವ ಸಿಡಿ ಯುವತಿಯನ್ನು ಮತ್ತೆ ಕರೆಸಿ ಮುಖಾಮುಖಿ ವಿಚಾರಣೆ ನಡೆಸಲು ತನಿಖಾಧಿಕಾರಿಗಳು ಸಿದ್ದತೆ ನಡೆಸಿದ್ದರು.
ಆದರೆ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಡಿ ಗ್ಯಾಂಗ್ ಬಲೆಗೆ ಕೆಡವಲು ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ನಾಪತ್ತೆ:
ಸಿಡಿ ಯುವತಿಯು ಪ್ರತ್ಯಕ್ಷಳಾದ ದಿನದಿಂದ ರಮೇಶ್ ಜಾರಕಿಹೊಳಿ ಇದುವರೆಗೂ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಜಾರಕಿಹೊಳಿಯೇ ನೀಡಿದ್ದ ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಏಪ್ರಿಲ್ ೨ ರಂದು ವಿಚಾರಣೆಗೆ ಹಾಜರಾಗಬೇಕಿತ್ತು.
ಆದರೆ ಜ್ವರದ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ ಎಂದು ಜಾರಕಿಹೊಳಿ ಪರ ವಕೀಲರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬರುವಂತೆ ಪೊಲೀಸರು ಸೂಚಿಸಿದ್ದರು.
ಈಗಾಗಲೇ ಯುವತಿ ನ್ಯಾಯಾಧೀಶರು ಹಾಗೂ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಕೂಡ ಮುಗಿದಿದೆ. ಆದರೆ ಇದುವರೆಗೆ ಅತ್ಯಾಚಾರ ಕೇಸ್‌ನಲ್ಲಿ ಜಾರಕಿಹೊಳಿ ವಿಚಾರಣೆಯೇ ನಡೆದಿಲ್ಲ.
ಕೊರೊನಾ ಬಾಯ್ಬಿಟ್ಟ ಸಚಿವ:
ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಸಚಿವ ಭೈರತಿ ಬಸವರಾಜ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಬಂದಿದೆ ಎಂದು ತಿಳಿಸಿದ್ದಾರೆ.
ಖಂಡಿತ, ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರುತ್ತಾರೆ. ಅವರಿಗೆ ಕೊರೊನಾ ಬಂದಿದೆ ಎಂಬ ಮಾತುಗಳಿವೆ. ಕೊರೊನಾ ಇರುವುದರಿಂದ ಗುಣಮುಖರಾಗಿ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ಜಾರಕಿಹೊಳಿ ಜೊತೆ ಚರ್ಚೆ:
ಕೇವಲ ಚುನಾವಣಾ ಪ್ರಚಾರ ಕುರಿತು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿದ್ದೇನೆ. ರಮೇಶ್ ಬಾಲಚಂದ್ರ ಜೊತೆ ನಿನ್ನೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಇಂದು ನಾನು, ನಮ್ಮೆಲ್ಲಾ ನಾಯಕರು ಗೋಕಾಕ, ಅರಭಾವಿಗೆ ಹೋಗ್ತಿದ್ದೇವೆ, ಮುಖ್ಯಮಂತ್ರಿಗಳ ಸೂಚನೆಯಂತೆ ಬೆಳಗಾವಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂದರು.
ಆರೋಪಿಗೆ ರಕ್ಷಣೆ:
ಸಂತ್ರಸ್ತ ಯುವತಿ ಹಾಜರಾದ ದಿನದಿಂದಲೂ ಆರೋಪಿ ತಲೆಮರೆಸಿಕೊಂಡಿದ್ದಾರೆ, ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ. ಆರೋಪಿಯೊಬ್ಬನನ್ನು ತಲೆಮರೆಸಿಕೊಳ್ಳಲು ಸಹಕರಿಸಿದ ಕುಖ್ಯಾತಿ, ಅತ್ಯಾಚಾರ ಆರೋಪಿಯನ್ನು ರಕ್ಷಿಸುವ ಕೀರ್ತಿ ಬಿಜೆಪಿಗೆ ಸಲ್ಲಬೇಕು ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.
ರಮೇಶ್ ಜಾರಕಿಹೊಳಿಯ ಅತ್ಯಾಚಾರ ಪ್ರಕರಣವೊಂದೇ ಸಾಕು, ಬಿಜೆಪಿ ಆಡಳಿತದ ನಿಜಬಣ್ಣ ತಿಳಿಯಲು. ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅತ್ಯಾಚಾರ ಆರೋಪಿಯನ್ನು ರಾಜಮರ್ಯಾದೆಯಲ್ಲಿ ನೆಪಮಾತ್ರದ ವಿಚಾರಣೆ ನಡೆಸಲಾಗಿದೆ ಎಂದು ಕಿಡಿಕಾರಿದೆ.
ಕ್ಲೀನ್ ಚಿಟ್ ಸರಿಯೇ:
ಆರೋಪಿಯನ್ನು ಬಂಧಿಸದೆ ಚುನಾವಣಾ ಪ್ರಚಾರಕ್ಕೆ ಸ್ವತಃ ಮುಖ್ಯಮಂತ್ರಿ ಕರೆಯುತ್ತಾರೆ. ಸ್ವತಃ ಮುಖ್ಯಮಂತ್ರಿಗಳು ತನಿಖೆ ನಡೆಸದೆ ಅವರದು ತಪ್ಪಿಲ್ಲ ಎಂದು ಕ್ಲೀನ್ ಚಿಟ್ ನೀಡುತ್ತಾರೆ. ನಾವೆಲ್ಲ ಆರೋಪಿ ಬೆಂಬಲಕ್ಕಿದ್ದೇವೆ ಎಂದು ಹಲವು ಸಚಿವರು ಹೇಳುತ್ತಾರೆ. ಇದೆಲ್ಲವೂ ಆರೋಪಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎನ್ನಲು ನಿದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಬಿಎಸ್‌ವೈ ಅವರೇ, ಅತ್ಯಾಚಾರ ಆರೋಪಿಯದು ತಪ್ಪಿಲ್ಲ, ಷಡ್ಯಂತ್ರ ನಡೆಸಲಾಗಿದೆ ಎಂದು ಹೇಳಿದ್ದೀರಿ. ನಿಮಗೆ ಹೇಗೆ ಅದು ಷಡ್ಯಂತ್ರ ಎನಿಸಿತು, ತಮ್ಮಲ್ಲಿ ಅದಕ್ಕಿರುವ ಸಾಕ್ಷ್ಯಗಳೇನು ಎನ್ನುವುದನ್ನು ತಾವೂ ಎಸ್‌ಐಟಿ ಮುಂದೆ ಹಾಜರಾಗಿ ತಿಳಿಸಿಬಿಡಿ ಸ್ವಾಮಿ! ಪ್ರಕರಣ ಇತ್ಯರ್ಥವಾಗಿಬಿಡಲಿ ಎಂದು ಟೀಕಿಸಿದೆ.