ಜಾಮೀನು ಕೋರಿ ಹಾಲಶ್ರೀ ಕೋರ್ಟಿಗೆ ಮೊರೆ

ಬೆಂಗಳೂರು,ಸೆ.೧೫-ಉದ್ಯಮಿಗೆ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ೫ ಕೋಟಿ ರೂ ವಂಚನೆ ಪ್ರಕರಣದ ೩ನೇ ಆರೋಪಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಹಿರೇಹಡಗಲಿ ಹಾಲುಮಠದ ಅಭಿನವ ಹಾಲಶ್ರೀ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಭಿನವ ಹಾಲಶ್ರೀ ಪರ ವಕೀಲರು ೫೭ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಈ ಜಾಮೀನು ಅರ್ಜಿ ವಿಚಾರಣೆ ನಾಳೆ (ಸೆ.೧೬) ನಡೆಯಲಿದೆ.
ವಂಚನೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ಹಾಲಶ್ರೀ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಲ್ಲಿ ಅಡಗಿರುವ ಅವರ ಪತ್ತೆಗೆ ಸಿಸಿಬಿ ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದು ನಿನ್ನೆ ಸಿಸಿಬಿ ಪೊಲೀಸರು ಹಿರೇಹಡಗಲಿಯಲ್ಲಿರುವ ಮಠಕ್ಕೆ ಹೋಗಿ ನೋಟಿಸ್ ಅಂಟಿಸಿ ಬಂದಿದ್ದಾರೆ.
ಇದೊಂದು ಹೈಪ್ರೊಫೈಲ್ ಪ್ರಕರಣ ಹಾಗೂ ಪ್ರಕರಣದ ಹಲವರನ್ನು ಈಗಾಗಲೇ ಬಂಧಿಸಿರುವುದರಿಂದ ನಿರೀಕ್ಷಣಾ ಜಾಮೀನು ಕೊಡುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ.
ಹಾಲಶ್ರೀಗೆ ಜಾಮೀನು ನೀಡಲು ಕೋರ್ಟ್ ಕೆಲವು ದಿನಗಳ ಮಟ್ಟಿಗೆ ಬಂಧನಕ್ಕೆ ತಡೆಯಾಜ್ಞೆ ನೀಡಲು ಸಿಸಿಬಿಯಿಂದ ಅಫಿಡವಿಟ್ ಕೇಳುವ ಸಾಧ್ಯತೆಯೂ ಇದೆ.
ಅಜ್ಞಾತ ಸ್ಥಳ ಪತ್ತೆಗೆ ಶೋಧ:
ಒಂದೊಮ್ಮೆ ಜಾಮೀನು ಕೊಡದೆ ಹೋದರೆ ಸ್ವಾಮೀಜಿಗಳು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ. ಆದರೆ, ಅದರ ನಡುವೆ ಸಿಸಿಬಿ ಬಂಧಿಸಿದರೆ ಅದು ಸಾಧ್ಯವಾಗುವುದಿಲ್ಲ. ಹಾಗೆ ಮಾಡುವುದಿದ್ದರೆ ಅವರು ಅಜ್ಞಾತ ಸ್ಥಳದಿಂದಲೇ ಇದನ್ನೆಲ್ಲ ಮಾಡಬೇಕಾಗುತ್ತದೆ. ಅದಕ್ಕೆ ಮೊದಲು ಸಿಸಿಬಿ ಪೊಲೀಸರು ಅಜ್ಞಾತ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸುವ ಸಾಧ್ಯತೆಯೂ ಕಂಡುಬಂದಿದೆ.
ಪ್ರಕರಣದಲ್ಲಿ ಈಗ ಹಾಲಶ್ರೀ ಅವರ ಪಾತ್ರ ಬಹುಮುಖ್ಯವಾಗಿದೆ. ಅವರು ಗೋವಿಂದ ಪೂಜಾರಿ ಅವರಿಂದ ನೇರವಾಗಿ ೧.೫ ಕೋಟಿ ರೂ.ಯನ್ನು ಸ್ವೀಕರಿಸಿದ ಬಗ್ಗೆ ಸ್ಪಷ್ಟವಾದ ದಾಖಲೆಗಳು ಇವೆ ಎಂದು ಹೇಳಲಾಗುತ್ತಿದೆ.
ರಾಜಕೀಯ ಸಂಪರ್ಕ:
ಇಡೀ ಪ್ರಕರಣದಲ್ಲಿ ಟಿಕೆಟ್‌ಗಾಗಿ ಗಂಭೀರ ಪ್ರಯತ್ನ ನಡೆದಿರುವುದು ಹಾಲಶ್ರೀಗಳಿಂದಾಗಿದ್ದು, ಅವರ ರಾಜಕೀಯ ಸಂಪರ್ಕ ಬಳಸಿಕೊಂಡು ಟಿಕೆಟ್ ಕೊಡಿಸಬಹುದು ಎಂಬ ನೆಲೆಯಲ್ಲೇ ಚೈತ್ರಾ ಕುಂದಾಪುರ ಗ್ಯಾಂಗ್ ಪ್ಲ್ಯಾನ್ ಮಾಡಿತ್ತು.
ಇದೇ ಕಾರಣಕ್ಕಾಗಿ ಚೈತ್ರಾ ಕುಂದಾಪುರ ನಿನ್ನೆ ಸಿಸಿಬಿ ಕಚೇರಿಯಲ್ಲಿ ಸ್ವಾಮೀಜಿ ಸಿಕ್ಕಾಕಿಕೊಳ್ಳಲಿ, ಎಲ್ಲಾ ಸತ್ಯ ಹೊರಗೆಬರುತ್ತದೆ ಎಂದು ಹೇಳಿದ್ದು ಎನ್ನಲಾಗಿದೆ.
ಚೈತ್ರಾ ಕುಂದಾಪುರ ಮತ್ತವರ ಗ್ಯಾಂಗ್ ಸ್ವಾಮೀಜಿಯವರಿಗೆ ಗೋವಿಂದ ಪೂಜಾರಿ ಅವರನ್ನು ಪರಿಚಯ ಮಾಡಿಸಿ ಟಿಕೆಟ್ ಕೊಡಿಸಿ ಎಂದು ಬೇಡಿಕೆ ಇಟ್ಟಾಗ ಸ್ವಾಮೀಜಿ ೧.೫ ಕೋಟಿ ರೂ. ಬೇಡಿಕೆ ಇಟ್ಟಿದ್ದರು. ೨೦೨೨ರ ಸೆಪ್ಟೆಂಬರ್ ಮೊದಲವಾರದಲ್ಲಿ ಈ ಘಟನೆ ನಡೆದಿತ್ತು. ಬಳಿಕ ೨೦೨೩ರ ಜನವರಿ ೧೬ರಂದು ಗೋವಿಂದ ಪೂಜಾರಿ ಜಯನಗರದಲ್ಲಿ ಸ್ವಾಮೀಜಿಯ ಆಶ್ರಮದಲ್ಲಿ ಹಣ ನೀಡಿದ್ದರು.
ಮೋಸದ ಬಲೆಗೆ :
ಇದೆಲ್ಲ ಪ್ರಕರಣ ಮುಗಿದು ಟಿಕೆಟ್ ಸಿಗದೆ ಇದ್ದಾಗ ಮೋಸದ ಬಲೆಗೆ ಬಿದ್ದಿದ್ದೇನೆ ಎನ್ನುವ ಅರಿವಾಗುವ ಪೂಜಾರಿ ಅವರು ಸ್ವಾಮೀಜಿಯವರನ್ನೂ ಕೇಳುತ್ತಾರೆ. ಆಗ ಸ್ವಾಮೀಜಿಯವರು ನಾನು, ನಾನು ತೆಗೆದುಕೊಂಡು ೧.೫ ಕೋಟಿ ರೂ.ಗೆ ಮಾತ್ರ ಜವಾಬ್ದಾರ. ಅದನ್ನು ಕೊಡುತ್ತೇನೆ. ದಯವಿಟ್ಟು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಬೇಡಿ ಎಂದು ಕೇಳಿಕೊಳ್ಳುತ್ತಾರೆ. ಆದರೆ ಗೋವಿಂದ ಪೂಜಾರಿ ಅವರು ಸ್ವಾಮೀಜಿಯನ್ನೂ ಸೇರಿಸಿಯೇ ದೂರು ದಾಖಲಿಸಿದ್ದಾರೆ.