ಜಾಮೀನು ಕೋರಿ ಮಾಡಾಳ್ ಕೋರ್ಟಿಗೆ ಮೊರೆ

ನಾಳೆ ವಿಚಾರಣೆ
ಬೆಂಗಳೂರು,ಮಾ.೬: ಪುತ್ರನ ಲಂಚ ಕೋಟ್ಯಂತರ ಹಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಮಾಡಾಳು ವಿರೂಪಾಕ್ಷಪ್ಪ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠವು ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.ಕೆಎಸ್‌ಡಿಎಲ್‌ನ ಟೆಂಡರ್‌ನ್ನು ಕೊಡಿಸಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಅವರು ಕಳೆದ ಗುರುವಾರ ೪೦ ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಿದ್ದರು. ಇದಾದ ನಂತರ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ನಾಪತ್ತೆಯಾಗಿದ್ದರು. ಇವರ ಪತ್ತೆಗೆ ಲೋಕಾಯುಕ್ತ ಪೊಲೀಸರು ೪ ತಂಡಗಳನ್ನು ರಚಿಸಿ ಶೋಧ ನಡೆಸಿದ್ದರಾದರೂ ವಿರೂಪಾಕ್ಷಪ್ಪ ಅವರನ್ನು ಪತ್ತೆಹಚ್ಚಲಾಗಲಿಲ್ಲ.ಶಾಸಕರ ಪತ್ತೆಗೆ ಲೋಕಾಯುಕ್ತ ಪೊಲೀಸರು. ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದರು.ಈ ಎಲ್ಲ ಬೆಳವಣಿಗೆಗಳ ನಡುವೆಯೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಾಪತ್ತೆಯಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿ ಅವರ ವಿಚಾರಣೆಗೆ ಸಿದ್ಧತೆ ನಡೆಸಿದ್ದರು.ಲಂಚ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪ್ರಶಾಂತ್ ಮಾಡಾಳ್ ಮತ್ತು ಇತರ ನಾಲ್ವರನ್ನು ವಿಚಾರಣೆಗೊಳಪಡಿಸಲು ತಮ್ಮ ಕಸ್ಟಡಿಗೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಇಂದು ಅರ್ಜಿ ಸಲ್ಲಿಸಿ ಪ್ರಶಾಂತ್ ಮಾಡಾಳ್ ಮತ್ತು ಇತರರನ್ನು ವಶಕ್ಕೆ ಪಡೆಯುವ ಕಾನೂನು ಪ್ರಕ್ರಿಯೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.ಈ ನಡುವೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್ ೪೦ ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳಲು ಸ್ಮಾರ್ಟ್ ವಾಚ್ ಕಾರಣವಾಗಿರುವುದು ಬೆಳಕಿಗೆ ತಂದಿದೆ.ಲಂಚ ಕೊಡುವಾಗ ಉದ್ಯಮಿ ಸ್ಮಾರ್ಟ್ ವಾಚ್ ಧರಿಸಿದ್ದು, ವಾಚ್ ನಲ್ಲಿ ಕ್ಯಾಮೆರಾ ಹಾಕಲಾಗಿತ್ತು. ಇದೇ ವೇಳೆ ಲಂಚ ನೀಡುತ್ತಿರುವ ವಿಡಿಯೋ ಹಾಗೂ ಸಂಭಾಷಣೆಯನ್ನು ಈ ವಾಚ್ ನಲ್ಲಿ ರೆಕಾರ್ಡ್ ಮಾಡಲಾಗಿದ್ದು, ಸಾಕ್ಷ್ಯಾಧಾರಗಳಿಂದ ಇದೀಗ ಶಾಸಕ ಪುತ್ರ ಜೈಲು ಸೇರಬೇಕಾಗಿದೆ.ಬಿಜೆಪಿ ಶಾಸಕ ಪುತ್ರ ಪ್ರಶಾಂತ್ ಅವರನ್ನು ಲೋಕಾಯುಕ್ತ ತಂಡ ಕಳೆದ ಮಾ. ೨ ರಂದು ವಶಕ್ಕೆ ಪಡೆದಿತ್ತು. ಕರ್ನಾಟಕದ ಉದ್ಯಮಿ ಶ್ರೇಯಸ್ ಕಶ್ಯಪ್ ಅವರ ಕಂಪನಿ ಕೆಮಿಕ್ಸಿಲ್ ಕಾರ್ಪೊರೇಷನ್ ಮತ್ತು ಸಹವರ್ತಿ ಸಂಸ್ಥೆ ಡೆಲಿಸಿಯಾ ಕಾರ್ಪೊರೇಷನ್ ನಿಂದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ಗೆ ತೈಲ ಸರಬರಾಜು ಮಾಡುವ ಗುತ್ತಿಗೆ ಪಡೆಯಲು ಲಂಚ ನೀಡಲಾಯಿತು. ೧.೨ ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.
ಬಿಗಿ ಭದ್ರತೆ:
ಈ ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ತಂಡ ಪ್ರಶಾಂತ್ ಅವರನ್ನು ಬಂಧಿಸಿತ್ತು. ಆದರೆ ಶಾಸಕ ಹಾಗೂ ಕೆಎಸ್ ಡಿಎಲ್ ಅಧ್ಯಕ್ಷ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಶಾಸಕ ವಿರೂಪಾಕ್ಷಪ್ಪ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಮಾರ್ಚ್ ೨ ಮತ್ತು ೩ ರಂದು ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ ಪ್ರಶಾಂತ್ ಅವರ ವೈಯಕ್ತಿಕ ಕಚೇರಿಯಲ್ಲಿ ೨ ಕೋಟಿ ರೂ. ಮತ್ತು ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದಿಂದ ೬,೧೦,೩೦,೦೦೦ ರೂ ಪತ್ತೆಯಾಗಿತ್ತು.

ಮಾಡಾಳ್ ಉಚ್ಛಾಟನೆ ಸಾಧ್ಯತೆ
ಕೆಎಸ್‌ಡಿಎಲ್ ಟೆಂಡರ್‌ನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ.
ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಈ ಪ್ರಕರಣ ಸಂಬಂಧ ಎಐಆರ್ ದಾಖಲಿಸಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಮೊದಲ ಅರೋಪಿ ಮಾಡಿದ್ದರು. ಇದು ಬಿಜೆಪಿಗೆ ಮುಜುಗರ ತಂದಿದ್ದು, ಈ ಪ್ರಕರಣದಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಲಿದೆ.
ಈ ಲಂಚ ಪ್ರಕರಣದ ಬಗ್ಗೆ ವರಿಷ್ಠರಿಗೆ ವರದಿಯನ್ನು ರಾಜ್ಯ ಬಿಜೆಪಿ ಸಲ್ಲಿಸಿದ್ದು, ವರಿಷ್ಠರ ಸೂಚನೆಯಂತೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಉಚ್ಛಾಟಿಸಲಾಗುವುದು ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಇಂದು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆಯೇ ಪಕ್ಷದಿಂದ ಉಚ್ಛಾಟಿಸುವ ಪ್ರಕ್ರಿಯೆಗಳು ನಡೆದಿವೆ ಎಂದು ಹೇಳಲಾಗಿದೆ.