ಜಾಬ್ ಕಾರ್ಡ್‍ನಲ್ಲಿ ಹೆಸರು ಸೇರಿಸಲು ಆಗ್ರಹ

ಲಕ್ಷ್ಮೇಶ್ವರ,ಜು11: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಾಬ್ ಕಾರ್ಡುಗಳಲ್ಲಿ ತಮ್ಮ ಹೆಸರು ಸೇರಿಸುವಂತೆ ಆಗ್ರಹಿಸಿ ಬಾಲೆಹೊಸೂರ ಗ್ರಾಮಸ್ಥರಿಂದ ಗ್ರಾಪಂ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಯಲ್ಲಿ ಭಾಗವಹಿಸಿದ ಕಾರ್ಮಿಕರ ಹೆಸರನ್ನು ಉದ್ಯೋಗ ಚೀಟಿಯಲ್ಲಿ ನಮೂದಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗುವ ಸಂಭವ ಇದೆ. ಉದ್ಯೋಗ ಖಾತ್ರಿ ಯೋಜನೆಯ ಲಾಭ ಕುಟುಂಬದ ಸದಸ್ಯರಿಗೆ ಸಿಗುವಂತಾಗಬೇಕು. ಅಲ್ಲದೆ ನಿಯಮಿತ ಅವಧಿಯಲ್ಲಿ ಖಾತ್ರಿ ಯೋಜನೆಯ ಹಣ ಕಾರ್ಮಿಕರಿಗೆ ಲಭಿಸುವಂತಾಗಬೇಕು ಎಂದು ಹೇಳಿದರು.
ಈ ವೇಳೆ ಬಾಲೆಹೊಸೂರ ಗ್ರಾಮದ ನೂರಾರು ಮಹಿಳೆಯರು ಹಾಗೂ ಪುರುಷರು ಗ್ರಾಪಂ ಕಚೇರಿಯ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.