ಜಾನ್ ಸನ್ ಅಂಡ್ ಜಾನ್ ಸನ್ ಮೂರನೇ ಹಂತದ ದತ್ತಾಂಶ ಸಲ್ಲಿಕೆ ಸಿದ್ದತೆ

ವಾಷಿಂಗ್ಟನ್, ಜ.೧೨-ಅತಿ ದೊಡ್ಡ ಔಷಧ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಜಾನ್ಸನ್ ಅಂಡ್ ಜಾನ್ಸನ್ ಮೂರನೇ ಹಂತದ ಕೋವಿಡ್ ಲಸಿಕಾ ಪ್ರಯೋಗದ ದತ್ತಾಂಶವನ್ನು ಜನವರಿ ೨೧ ರೊಳಗೆ ಅಮೆರಿಕದ ನಿಯಂತ್ರಣ ಸಂಸ್ಥೆಗೆ ಸಲ್ಲಿಸಲು ಮುಂದಾಗಿದೆ.

ವಿಶ್ವದ ಅನೇಕ ದೇಶಗಳಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪ್ರಯೋಗ ನಡೆಸಿದ್ದು ಅದರ ದತ್ತಾಂಶವನ್ನು ಈ ತಿಂಗಳ ಅಂತ್ಯದಲ್ಲಿ ಸಲ್ಲಿಸುವ ಸಾಧ್ಯತೆ ಇದೆ.

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಒಂದು ಡೋಸ್ ಪಡೆದರೆ ಸಾಕು ಎಂದು ಸಂಸ್ಥೆ ತಿಳಿಸಿದೆ.ಸದ್ಯ ಅಭಿವೃದ್ಧಿಪಡಿಸಿರುವ ಸೋಂಕಿನ ಲಸಿಕೆಗಳು ಕನಿಷ್ಠ ಎರಡು ಡೋಸ್ ಪಡೆಯಬೇಕಾಗಿದೆ.

ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ದತ್ತಾಂಶವನ್ನು ಪರಿಶೀಲಿಸಿ ಲಸಿಕೆಗೆ ದೇಶದಲ್ಲಿ ಅನುಮತಿ ನೀಡಬೇಕು ಅಥವಾ ಬೇಡವೇ ಎನ್ನುವುದನ್ನು ನಿರ್ಧಾರ ಕೈಗೊಳ್ಳಲಿದೆ.

ದಕ್ಷಿಣ ಆಫ್ರಿಕಾದಲ್ಲಿ ದೊಡ್ಡಮಟ್ಟದಲ್ಲಿ ಲಸಿಕೆಯ ಪ್ರಯೋಗ ನಡೆದಿದ್ದು ಆಶಾದಾಯಕ ಬೆಳವಣಿಗೆ ಕಂಡು ಬಂದಿದೆ. ಹೀಗಾಗಿ ಪ್ರಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ದೃಢೀಕರಣ ಸಂಸ್ಥೆಗೆ ಅನುಮತಿಗಾಗಿ ಮನವಿ ಮಾಡಿದೆ.

ಈಗಾಗಲೇ ವಿಶ್ವದ ಅನೇಕ ದೇಶಗಳಲ್ಲಿ ಕೊರೋನೋ ಸೋಂಕಿನ ತುರ್ತು ಲಸಿಕೆ ಅಭಿಯಾನ ಆರಂಭವಾಗಿದೆ. ಭಾರತದಲ್ಲಿ ಇದೇ ತಿಂಗಳ ೧೬ರಿಂದ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ.

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಅನೇಕ ಔಷಧ ತಯಾರಿಕಾ ಸಂಸ್ಥೆಗಳು ಸೇರಿದಂತೆ ಇನ್ನಿತರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಲಸಿಕೆ ಪೂರೈಕೆಗೆ ಮುಂದಾಗಿದೆ