ಜಾನ್ ಕಿ ಬಾತ್ ಅಗತ್ಯ


ನವದೆಹಲಿ,ಏ.೨೫- ದೇಶದಲ್ಲಿ ಕೊರೊನಾ ಅಲೆ ಸೃಷ್ಟಿಸುತ್ತಿರುವ ಸಾವು-ನೋವುಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಕೊರೊನಾದಿಂದ ಬಳಲುತ್ತಿರುವವರ ನೆರವಿಗೆ ಕಾಂಗ್ರೆಸ್ ಮುಂದಾಗಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ತಮ್ಮ ಸಹೋದ್ಯೋಗಿಗಳಿಗೆ ಕರೆ ನೀಡಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ರೋಗಿಗಳಿಗೆ ಆಮ್ಲಜನಕದ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ. ಮನ್ಕಿ ಬಾತ್ ಬದಲಿಗೆ ಜಾನ್ ಕೀ ಬಾತ್ (ಮನದ ಮಾತಿನ ಬದಲು ಜೀವ ಕುರಿತು ಮಾತನಾಡುವುದು) ಮುಖ್ಯವಾಗಿದೆ ಎಂದು ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸಿದ್ದಾರೆ.
ದೇಶದಲ್ಲಿ ಸೃಷ್ಟಿಯಾಗಿರುವ ಕೊರೊನಾ ಬಿಕ್ಕಟ್ಟಿನ ಸಂಬಂಧ ಜವಾಬ್ದಾರಿಯುತ ನಾಗರಿಕರ ಅಗತ್ಯವಿದೆ. ನನ್ನ ಕಾಂಗ್ರೆಸ್ ಸಹೋದ್ಯೋಗಿಗಳು ರಾಜಕೀಯ ಕೆಲಸಗಳನ್ನು ಬದಿಗಿಟ್ಟು ಜನರ ಸಹಾಯಕ್ಕೆ ಮುಂದಾಗಿ ಜನರ ನೋವನ್ನು ಕಡಿಮಾ ಮಾಡಿ ಎಂದು ಕೇಳಿಕೊಂಡಿದ್ದಾರೆ. ಜನರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ಕುಟುಂಬದ ಧರ್ಮ ಎಂದಿರುವ ರಾಹುಲ್, ಸರ್ಕಾರ ಆಡಳಿತ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ಕೋವಿಡ್-೧೯ ಕಾರಣದಿಂದಾಗಿ ದೇಶದಲ್ಲಿ ೨೭೬೭ ಸಾವು ಸಂಭವಿಸಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ ೧,೬೯,೬೦,೧೭೨ಕ್ಕೆ ಏರಿಕೆಯಾಗಿದೆ.
ಇದುವರೆಗೂ ಕೊರೊನಾ ಸೋಂಕಿಗೆ ೧,೯೨,೩೧೧ ಜನ ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.