ಜಾನ್ಸನ್ ಅಂಡ್ ಜಾನ್ಸ್ ನಿಂದ ೭ ದಶಲಕ್ಷ ಮಕ್ಕಳಿಗೆ ಕಣ್ಣಿನ ಚಿಕಿತ್ಸೆ ಗುರಿ

ಕೋಲ್ಕತಾ,ಫೆ.೨೨:ಜಾನ್ಸನ್ & ಜಾನ್ಸನ್ ಸಂಸ್ಥೆ ಮತ್ತು ಅಂತರಾಷ್ಟ್ರೀಯ ಮಾನವೀಯ ಸ್ವಯಂಸೇವಕ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಫೌಂಡೇಶನ್ (ಎಲ್‌ಸಿಐಎಫ್) ಸಹಯೋಗದಲ್ಲಿ ಸೈಟ್ ಫಾರ್ ಕಿಡ್ಸ್ ಉಪಕ್ರಮ ಮುಂದುವರಿದಿದ್ದು, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ೭ ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣಿನ ಚಿಕಿತ್ಸೆ ಒದಗಿಸುವ ಗುರಿಯನ್ನು ಇಟ್ಟುಕೊಂಡಿದೆ. ಕಡಿಮೆ ಆದಾಯ ಹೊಂದಿರುವ ಮತ್ತು ಹಿಂದುಳಿದ ಸಮುದಾಯದ ಮಕ್ಕಳಿಗೆ ಸಮಗ್ರ ಕಣ್ಣಿನ ಚಿಕಿತ್ಸೆ ಒದಗಿಸುವ ಉದ್ದೇಶ ಸಾಕಾರಕ್ಕಾಗಿ ಸೈಟ್ ಫಾರ್ ಕಿಡ್ಸ್ ದುಡಿಯುತ್ತಿದೆ.
೨೦೨೪ರಲ್ಲಿ ೫೦೦ಕ್ಕೂ ಹೆಚ್ಚು ಮಕ್ಕಳ ಮೊದಲ ಸ್ಕ್ರೀನಿಂಗ್ ಕೋಲ್ಕತ್ತಾದಲ್ಲಿ ನಡೆಯಿತು. ಆ ಮೂಲಕ ಭಾರತದಲ್ಲಿ ಒಟ್ಟು ದೃಷ್ಟಿ ಪರೀಕ್ಷೆಗಳ ಸಂಖ್ಯೆ ೨೮ ಮಿಲಿಯನ್‌ಗೆ ತಲುಪಿದಂತಾಗಿದೆ. ಆರಂಭಿಕ ಪತ್ತೆ ಮತ್ತು ಆರೈಕೆಯನ್ನು ಮಾಡುವ ಸಲುವಾಗಿ ೭೫,೦೦೦ಕ್ಕೂ ಹೆಚ್ಚು ಶಿಕ್ಷಕರಿಗೆ ಕಣ್ಣಿನ ಆರೋಗ್ಯದ ಬಗ್ಗೆ ತರಬೇತಿ ನೀಡಲಾಗಿದೆ. ಇದರಿಂದ ಈ ಕಾರ್ಯಕ್ರಮದ ಪರಿಣಾಮ ಹೆಚ್ಚಳವಾಗಲಿದೆ.
“ಮಕ್ಕಳು ತಮ್ಮ ಸುತ್ತಲಿರುವ ಪ್ರಪಂಚವನ್ನು ಅರ್ಥಮಾಡಿಕೊಳ್ಳುವಲ್ಲಿ ದೃಷ್ಟಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸರಿಹೊಂದದ ದೃಷ್ಟಿ ಸಮಸ್ಯೆಯು ಮಗುವಿನ ಕಲಿಯುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಸುದೀರ್ಘ ಕಾಲದ ಕಾರ್ಪೊರೇಟ್ ಪಾಲುದಾರರಾದ ಜಾನ್ಸನ್ ಆಂಡ್ ಜಾನ್ಸನ್ ಜೊತೆಯಲ್ಲಿ, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ೭ ಮಿಲಿಯನ್ ಮಕ್ಕಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಾಗಲು ನಾವು ಬದ್ಧರಾಗಿದ್ದೇವೆ” ಎಂದು ಎಲ್‌ಸಿಐಎಫ್ ಅಧ್ಯಕ್ಷ ಬ್ರಿಯಾನ್ ಶೀಹನ್ ತಿಳಿಸಿದ್ದಾರೆ.
“ಸೈಟ್ ಫಾರ್ ಕಿಡ್ಸ್ ಉಪಕ್ರಮವು ಕೇವಲ ಮಕ್ಕಳ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುವುದಷ್ಟೇ ಅಲ್ಲ, ಜೊತೆಗೆ ಇಡೀ ಸಮುದಾಯದ ಪರಿವರ್ತನೆ ಮಾಡುತ್ತದೆ. ಪೋಷಕರು ಸಮಾಧಾನದಿಂದ, ಶಿಕ್ಷಕರು ಮಾಹಿತಿ ಹೊಂದುವ ಮೂಲಕ, ಸಮುದಾಯಗಳು ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಏಕಕಾಲದಲ್ಲಿ ಒಂದು ಮಗುವಿಗೆ ಜಗತ್ತನ್ನು ಸ್ಪಷ್ಟವಾಗಿ ನೋಡಲು ಮತ್ತು ಅವರ ಅತ್ಯುತ್ತಮ ಸಾಮರ್ಥ್ಯವನ್ನು ಸಾರ್ಥಕಪಡಿಸಲು ಸಹಾಯ ಮಾತ್ತಿದ್ದಾರೆ” ಎಂದೂ ಅವರು ಹೇಳಿದ್ದಾರೆ.
“ಸೈಟ್ ಫಾರ್ ಕಿಡ್ಸ್ ಮೂಲಕ ಭಾರತದಲ್ಲಿನ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಸ್ಪಷ್ಟ ದೃಷ್ಟಿ ಒದಗಿಸಲು ಎಲ್‌ಸಿಐಎಫ್ ನೊಂದಿಗೆ ನಮ್ಮ ದೀರ್ಘಕಾಲದ ಪಾಲುದಾರಿಕೆ ಗಮನಾರ್ಹವಾಗಿದೆ. ಈ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರಲು ನಾವು ಹೆಮ್ಮೆಪಡುತ್ತೇವೆ ಮತ್ತು ನಮ್ಮ ನಿರಂತರ ಸಹಯೋಗದ ಮೂಲಕ ಭಾರತ ಮತ್ತು ಏಷ್ಯಾ ಪೆಸಿಫಿಕ್ ವಲಯದಲ್ಲಿ ಇನ್ನೂ ಹೆಚ್ಚಿನ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಬಯಸುತ್ತೇವೆ” ಎಂದು ಜಾನ್ಸನ್ ಆಂಡ್ ಜಾನ್ಸನ್ ಮೆಡ್‌ಟೆಕ್ ನ ಏಷ್ಯಾ ಪೆಸಿಫಿಕ್ ವಿಷನ್ ಅಧ್ಯಕ್ಷ ಕ್ರಿಸ್ಟೋಫ್ ವೊನ್ವಿಲ್ಲರ್ ಹೇಳಿದರು.
ಮಕ್ಕಳಲ್ಲಿ ಕಣ್ಣಿನ ಆರೈಕೆಯಲ್ಲಿನ ಅಸಮಾನತೆಯನ್ನು ಪರಿಹರಿಸಲು ೨೦೦೨ರಲ್ಲಿ ಸ್ಥಾಪಿಸಲಾಗಿರುವ ಸೈಟ್ ಫಾರ್ ಕಿಡ್ಸ್, ಈಗ ವಿಶ್ವದಲ್ಲೇ ಅತಿ ದೊಡ್ಡ, ಪ್ರಸಿದ್ಧ, ಶಾಲಾ-ಆಧಾರಿತ ಕಣ್ಣಿನ ಆರೋಗ್ಯ ಕಾರ್ಯಕ್ರಮವಾಗಿದೆ. ಇದು ಈಗಾಗಲೇ ಏಷ್ಯಾ, ಆಫ್ರಿಕಾ ಮತ್ತು ಮತ್ತು ಯುಎಸ್ ನಲ್ಲಿ ೪೯ ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸೇವೆ ಸಲ್ಲಿಸಿದೆ.
ಸಂಭಾವ್ಯ ದೃಷ್ಟಿಹೀನತೆ ಅಥವಾ ಕಣ್ಣಿನ ಕಾಯಿಲೆಗಳೊಂದಿಗೆ ಗುರುತಿಸಲ್ಪಟ್ಟ ವಿದ್ಯಾರ್ಥಿಗಳನ್ನು ಹೆಚ್ಚಿನ ಮೌಲ್ಯಮಾಪನಕ್ಕಾಗಿ ಆರೋಗ್ಯ ಪೂರೈಕೆದಾರರಿಗೆ ರೆಫರ್ ಮಾಡಲಾಗುತ್ತದೆ. ಕುಟುಂಬಕ್ಕೆ ಯಾವುದೇ ವೆಚ್ಚ ಇರುವುದಿಲ್ಲ. ಇಲ್ಲಿಯವರೆಗೆ, ೨೨೨,೦೦೦ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಮತ್ತು ೫೫೦,೦೦೦ಕ್ಕೂ ಹೆಚ್ಚು ಜೋಡಿ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ.