ಜಾನುವಾರು ಹತ್ಯೆ ನಿಷೇಧ ಸರ್ಕಾರಕ್ಕೆ ನೋಟಿಸ್


ಬೆಂಗಳೂರು, ಜ.೧೩- ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ವಿಧೇಯಕ-೨೦೨೦ರ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್ ಸುಗ್ರೀವಾಜ್ಞೆಯನ್ನು ಅಸಂವಿಧಾನಿಕವೆಂದು ಘೋಷಿಸಿ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗುದಂ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು, ಕಾಯ್ದೆಯ ಸೆಕ್ಷನ್ ೨, ೧೨ ಹಾಗೂ ೧೩ರ ಪ್ರಕಾರ ಜಾನುವಾರುಗಳ ಸಾಗಿಸುವವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬಹುದು. ಇಂಥ ಸೆಕ್ಷನ್‌ಗಳ ಜಾರಿಯಿಂದಾಗಿ ರೈತರಿಗೆ ಹಾಗೂ ಜಾನುವಾರು ಸಾಗಿಸುವವರಿಗೆ ತೊಂದರೆಯಾಗುತ್ತದೆ.
ಇನ್ನು, ಈ ಕಾಯ್ದೆ ಜಾರಿಯಾದ ಮೇಲೆ ದಾವಣಗೆರೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜಾನುವಾರು ಸಾಗಣೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಾನುವಾರುಗಳನ್ನು ಸಾಗಿಸಿದರೆ, ಸೆಕ್ಷನ್ ೫ರ ಪ್ರಕಾರ ಶಿಕ್ಷಾರ್ಹ ಅಪರಾಧ ಎನ್ನಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.ಗೋಹತ್ಯೆ ನಿಷೇಧದಿಂದ ಭಾರತದ ಸಂವಿಧಾನದ ೧೯(ಜಿ) ವಿಧಿ ಖಾತರಿಪಡಿಸಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಹಾಗೆಯೇ ಸಂವಿಧಾನದ ೨೧ನೆ ಪರಿಚ್ಛೇದದ ಅಡಿಯಲ್ಲಿ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಿವೆ. ಹಾಗೆಯೇ ಈ ಸುಗ್ರೀವಾಜ್ಞೆಯು ವ್ಯಾಪಾರ ಮತ್ತು ವ್ಯವಹಾರದ ಹಕ್ಕನ್ನು ಉಲ್ಲಂಘಿಸಿವೆ ಎಂದು ಕೊತ್ವಾಲ್ ಅವರು ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಾನುವಾರುಗಳನ್ನು ಸಾಗಿಸುವವರ ವಿರುದ್ಧ ಪ್ರಕರಣ ದಾಖಲಿಸುವುದರಿಂದ ರೈತರಿಗೆ ತೊಂದರೆ ಉಂಟಾಗಬಹುದು. ಸರ್ಕಾರ ಈ ಕಾಯ್ದೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕೆಂದು ತಿಳಿಸಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ
ಆಕ್ಷೇಪಣೆ ಸಲ್ಲಿಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ಹಾಗೂ ಪಶುಸಂಗೋ
ಪನಾ ಇಲಾಖೆಗೆ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.