ಜಾನುವಾರು ಜಾತ್ರೆ, ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ

(ಸಂಜೆವಾಣಿ ವಾರ್ತೆ)
ಬಾದಾಮಿ,ಜ21 : ಸುಕ್ಷೇತ್ರ ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿರುವ ಜಾನುವಾರು ಜಾತ್ರೆಗೆ ಮತ್ತು ಗಣರಾಜ್ಯೋತ್ಸವದ ಆಚರಣೆಗೆ ಅಗತ್ಯ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು ಎಂದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ತಾ.ಪಂ.ಸಭಾಭವನದಲ್ಲಿ ನಡೆದ ಜಾನುವಾರು ಜಾತ್ರೆ ಹಾಗೂ ಗಣರಾಜ್ಯೋತ್ಸವದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಜ.30 ರಿಂದ ಫೆ.3 ರ ವರೆಗೆ ಎಪಿಎಂಸಿ ಆವರಣದಲ್ಲಿ ಜಾನುವಾರು ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಾನುವಾರು ಜಾತ್ರೆಗೆ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಜ.26 ರಂದು ಗಣರಾಜ್ಯೋತ್ಸವ ಆಚರಣೆಗೆ ಎಲ್ಲ ಸಿದ್ದತೆ ಮಾಡಬೇಕು ಎಂದು ತಹಶೀಲದಾರರು ಸೇರಿದಂತೆ ಎಲ್ಲ ತಾಲೂಕಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆಯ ಮೇಲೆ ತಹಶೀಲದಾರ ಜೆ.ಬಿ.ಮಜ್ಜಗಿ, ತಾ.ಪಂ.ಇಒ ಮಲ್ಲಿಕಾರ್ಜುನ ಬಡಿಗೇರ, ಸಿಪಿಐ ಡಿ.ಡಿ.ಧೂಳಖೇಡ, ಪಿ.ಎಸ್.ಐ.ನಿಂಗಪ್ಪ ಪೂಜಾರ ಹಾಜರಿದ್ದರು. ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ ಸಬನೀಸ್, ಬಿಇಒ ಎನ್.ವೈ.ಕುಂದರಗಿ, ಸಮಾಜ ಕಲ್ಯಾಣ ಇಲಾಖೆಯ ಎಂ.ಎಸ್.ಮಳಿಮಠ, ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕಾಮಟ್ಟದ ಅಧಿಕಾರಿಗಳು ಹಾಜರಿದ್ದರು.