ಜಾನುವಾರುಗಳ ಆರೋಗ್ಯ ಕಡೆ ಕಾಳಜಿ ವಹಿಸಲು ಸಲಹೆ

ಗೌರಿಬಿದನೂರು, ಸೆ.೨೫- ಗ್ರಾಮೀಣ ಭಾಗದಲ್ಲಿನ ಬಹುತೇಕ ಮಂದಿ ರೈತಾಪಿ ವರ್ಗದವರು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, ಜಾನುವಾರುಗಳ ಉತ್ತಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಆರ್.ರಾಘವೇಂದ್ರ ತಿಳಿಸಿದರು.
ತಾಲ್ಲೂಕಿನ ಬಳಗೆರೆ ಗ್ರಾಮದಲ್ಲಿ ಜಾನುವಾರುಗಳ ಆರೋಗ್ಯ ಮತ್ತು ಫಲಧೀಕರಣ ಶಿಬಿರದಲ್ಲಿ ಜಾನುವಾರುಗಳ ಆರೋಗ್ಯ ತಪಾಸಣೆ ಹಾಗೂ ಚುಚ್ಚುಮದ್ದು ನೀಡಿ ಅವರು ಮಾತನಾಡಿದರು.
ತಾಲ್ಲೂಕಿನ ಪಶುಪಾಲನಾ ಇಲಾಖೆಯ ವತಿಯಿಂದ ಪ್ರತೀ ಗ್ರಾಮವಾರು ಆರೋಗ್ಯ ತಪಾಸಣಾ ಹಾಗೂ ಫಲಧೀಕರಣ ಶಿಬಿರಗಳನ್ನು ಆಯೋಜನೆ ಮಾಡಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಈ ಗ್ರಾಮದಲ್ಲಿ ೧೦೦ ಕ್ಕೂ ಹೆಚ್ಚು ಜಾನುವಾರುಗಳಿದ್ದು ಹಂತಹಂತವಾಗಿ ಎಲ್ಲ ಜಾನುವಾರುಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಮಾಡಲಾಗುವುದು. ಕಳೆದ ವಾರ ಕರುಗಳಿಗೆ ಸೋಂಕು ರೋಗ ನಿವಾರಣೆಗಾಗಿ ಚಿಕಿತ್ಸೆ ನೀಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ನಡೆಯುವ ಆರೋಗ್ಯ ತಪಾಸಣಾ ಹಾಗೂ ಫಲಧೀಕರಣ ಶಿಬಿರಗಳ ಪ್ರಯೋಜನವನ್ನು ರೈತಾಪಿ ವರ್ಗದವರು ಪಡೆದು ಮನೆಯಲ್ಲಿನ ಜಾನುವಾರುಗಳ ಆರೋಗ್ಯವನ್ನು ಬಲಪಡಿಸಿಕೊಳ್ಳುವ ಜತೆಗೆ ಗುಣಮಟ್ಟದ ಹಾಲನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೈತರು ಪಶು ಇಲಾಖೆ ವತಿಯಿಂದ ನಡೆಸುವ ಶಿಬಿರಗಳ ಪ್ರಯೋಜನವನ್ನು ಪಡೆಯಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಹಂತಹಂತವಾಗಿ ಗ್ರಾಮದಲ್ಲಿನ ಎಲ್ಲ ಜಾನುವಾರುಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಫಲಧೀಕರಣವಾಗದ ರಾಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿದರು.
ಶಿಬಿರದಲ್ಲಿ ಪಶು ವೈದ್ಯ ಪರೀಕ್ಷಕರಾದ ಶ್ರೀನಿವಾಸಪ್ಪ, ಇಲಾಖೆಯ ಸಿಬ್ಬಂದಿಗಳಾದ ಡಿ.ಇ.ದೀಪಿಕಾ, ರಾಮು, ಶ್ರೀಕಂಠ ಭಾಗವಹಿಸಿದ್ದರು.