ಜಾನುವಾರುಗಳಿಗೆ ವಿಮೆ ಕಡ್ಡಾಯ

ಗುಬ್ಬಿ, ನ. ೨೪- ರೈತರು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಕಡಬ ಹೋಬಳಿಯ ಮೇಳೆಕಲ್ಲಹಳ್ಳಿದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಕ್ಕೂಟ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಹಾಲು ಉತ್ಪಾದಕರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಂಡರೆ ಸಂಕಷ್ಟದಲ್ಲಿ ನೆರವು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಾಲು ಉತ್ಪಾದಕರ ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ವಸತಿ ನಿಲಯದ ವ್ಯವಸ್ಥೆ ಮಾಡಲಾಗಿದೆ. ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತಿವೆ ಎಂದು ಹೇಳಿದರು.
ಒಕ್ಕೂಟದ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನಲ್ಲಿ ವಿಮೆ ಸೌಲಭ್ಯವನ್ನು ಸಂಪೂರ್ಣವಾಗಿ ಉಚಿತವಾಗಿಯೇ ನೀಡಲಾಗುತ್ತಿದ್ದು, ಇದರ ಅನುಕೂಲ ಪಡೆಯಬೇಕು. ಬಹುತೇಕ ತಾಲ್ಲೂಕಿನ ಎಲ್ಲಾ ಒಕ್ಕೂಟಗಳಿಗೂ ಸ್ವಂತ ಕಟ್ಟಡ ನಿರ್ಮಿಸುವ ಜೊತೆಗೆ ಶಿಥಲೀಕರಣ ಘಟಕ ಸಹ ನಿರ್ಮಿಸಲಾಗುತ್ತಿದೆ. ರೈತರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆಯಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದೆ. ಇದರ ಜತೆಯಲ್ಲಿ ಹಾಲು ಉತ್ಪಾದಕರ ಕಟ್ಟಡಗಳ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದು, ಇದರಿಂದ ಗ್ರಾಮಗಳ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡೇರಿ ಅಧ್ಯಕ್ಷ ಉಮೇಶ್, ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುರೇಶ್, ವ್ಯವಸ್ಥಾಪಕ ಡಾ.ಟಿ.ಎಂ. ಪ್ರಸಾದ್, ಉಪ ವ್ಯವಸ್ಥಾಪಕ ಚಂದ್ರಶೇಖರ್ ಬಿ. ಕೆದನೂರಿ, ವಿಸ್ತರಣಾಧಿಕಾರಿ ಮಂಜುನಾಥ್, ಪುಷ್ಪಲತಾ, ಸಿದ್ದಲಿಂಗಸ್ವಾಮಿ, ಜಯಕುಮಾರ್, ಮಲ್ಲಿಕಾರ್ಜುನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.