ಜಾನುವಾರುಗಳಿಗೆ ಲಸಿಕೆ ನೀಡಲು ಮನವಿ

ಕೋಲಾರ,ಸೆ.೨೪: ಜಿಲ್ಲೆಯ ಪಶು ಇಲಾಖೆಯಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸುವ ಜತೆಯಲ್ಲಿ ಗ್ರಾಮಗಳಿಗೆ ಇಲಾಖೆ ವೈದ್ಯರು ಖುದ್ದು ಭೇಟಿ ನೀಡಿ ಕಾಲು ಬಾಯಿ ಜ್ವರದ ಲಸಿಕೆಯನ್ನು ಸಮರ್ಪಕವಾಗಿ ಜಾನುವಾರಗಳಿಗೆ ನೀಡಬೇಕು ಎಂದು ನಮ್ಮ ಕೋಲಾರ ರೈತ ಸಂಘದಿಂದ ಪಶು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಡಾ. ಸುಭಾನ್‌ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಉತ್ತಮ ಮಳೆಯಾಗುತ್ತಿದ್ದು, ಹೈನೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವ ರೈತರ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಮಾರಕ ಖಾಯಿಲೆ ಭೀತಿಯಲ್ಲಿದ್ದಾರೆ. ಇಂತಹ ಸಂದಬ್ದಲ್ಲಿ ರೈತರಿಗೆ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜಾಗೃತಿ ವಹಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೂ ಸಹ ಇಲಾಖೆ ಹಾಗೂ ಪಶು ಚಿಕಿತ್ಸಾ ಕೇಂದ್ರದ ವೈದ್ಯರು ಜಾನುವಾರಗಳನ್ನು ಪರೀಕ್ಷಿಸಿ ಒಂದು ವೇಳೆ ಕಾಲುಬಾಯಿ ಜ್ವರ ಲಸಿಕೆ ಕಂಡು ಬಂದಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಜಾನುವಾರಗಳ ಹಿತ ಹಾಗೂ ರೈತರ ಹಿತದೃಷ್ಟಿಯಿಂದ ಜಾನುವಾರುಗಳಿಗೆ ಲಸಿಕೆ ಹಾಕುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜತೆಯಲ್ಲಿ ಜಾನುವಾರುಗಳಿಗೆ ಯಾವುದೇ ರೀತಿಯ ಔಷಧಿಗಳ ಕೊರತೆ ಎದುರಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಪಶು ಚಿಕಿತ್ಸಾ ಕೇಂದ್ರಗಳು ದಿನದ ೨೪ ಗಂಟೆಗಳ ಕಾಲ ಸಹಾಯವಾಣಿಯನ್ನು ತೆರೆದು ಮೊಬೈಲ್ ಆಂಬುಲೆನ್ಸ್ ಸೇವೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ನಮ್ಮ ಕೋಲಾರ ರೈತ ಸಂಘದ ನಾನಾ ಬೇಡಿಕೆಗಳು ಈಡೇರದ ಪಕ್ಷದಲ್ಲಿ ಪಶು ಇಲಾಖೆ ಕಚೇರಿ ಮುಂದೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ನಿಯೋಗದಲ್ಲಿ ನಮ್ಮ ಕೋಲಾರ ರೈತ ಸಂಘದ ಮುಖಂಡರಾದ ಕಾಮದೇನುಹಳ್ಳಿ ವೆಂಕಟಾಚಲಪತಿ, ಕೆ.ಬಿ ಮುನಿವೆಂಕಟಪ್ಪ, ಆಟೋ ವಿಶ್ವನಾಥ್, ಅಬ್ಬಣಿ ಮುನೇಗೌಡ, ಶಿಳ್ಳಂಗೆರೆ ಅಂಬರೀಶ್, ಗೋಪಾಲಗೌಡ, ಇಸೂರು, ಮಣಿ ಉಪಸ್ಥಿತರಿದ್ದರು.